ಬೆಂಗಳೂರು, ಜೂ 01(DaijiworldNews/MS): ದೇಶಾದ್ಯಂತ ಹಬ್ಬಿರುವ ಕೊರೊನಾ ಮನುಕುಲವನ್ನು ತಲ್ಲಣಗೊಳಿಸಿದೆ. ಈ ಮಹಾಮಾರಿಯಿಂದ ದೇಶದಲ್ಲಿ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ರಾಜ್ಯದಲ್ಲೂ ತಂದೆ - ತಾಯಿ ಇಬ್ಬರನ್ನು ಕಳೆದುಕೊಂಡು 18 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ , ರಾಯಚೂರು ಹಾಗೂ ಬಾಗಲಕೋಟೆಯಲ್ಲಿ ತಲಾ ಮೂರು ಮಕ್ಕಳು, ಬೆಂಗಳೂರು, ಬೆಳಗಾವಿ, ಬೀದರ್,ಮೈಸೂರುಗಳಲ್ಲಿ ತಲಾ ಎರಡು ಹಾಗೂ ಚಾಮರಾಜನಗರ, ಕೋಲಾರ, ದಾವಣಗೆರೆ ಹಾಗೂ ಮಂಡ್ಯದಲ್ಲಿ ತಲಾ ಒಂದೊಂದು ಮಕ್ಕಳು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇನ್ನು ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಅನಾಥ ಮಕ್ಕಳ ಪೋಷಣೆಗೆ ಮಾಸಿಕ 3,500 ರೂ. ಪಾವತಿಸಲಾಗುತ್ತದೆ. 10ನೇ ತರಗತಿ ಮುಗಿಸಿದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್ಟ್ಯಾಪ್, ಟ್ಯಾಬ್ ನೀಡಲಾಗುತ್ತದೆ. 21 ವರ್ಷದ ಹೆಣ್ಣುಮಕ್ಕಳಿಗೆ 1 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಈ ನಡುವೆ ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಸಡಿಲಗೊಳಿಸಿದೆ.