ವಿಜಯಪುರ, ಮೇ.31 (DaijiworldNews/HR): "ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಸ್ವಾರ್ಥಕ್ಕಾಗಿ ಕೊರೊನಾ ಲಾಕ್ಡೌನ್ ದುರ್ಬಳಕೆ ಆಗದಿರಲಿ. ರೋಗ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್ಡೌನ್ ಹಿಂಪಡೆಯಬೇಕು" ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಡಿದ ಅವರು, "ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಲಾಕ್ಡೌನ್ 7ಕ್ಕೆ ಕೊನೆಗೊಳ್ಳಲಿದ್ದು, ಆ ನಂತರ ವಿಸ್ತರಣೆ ಅಗತ್ಯವೇ ಎಂಬ ಚರ್ಚೆಯೇ ಅಪ್ರಸ್ತುತವಾಗಿದ್ದು, ಸೋಂಕು ಹರಡುವಿಕೆ ನಿಗ್ರಹಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕರ್ಫ್ಯೂ ಮುಂದುವರೆಸದೇ ಮುಕ್ತಗೊಳಿಸಬೇಕು" ಎಂದರು.
"ಕರ್ನಾಟಕದಲ್ಲಿ ಕೊರೊನಾ ಹರಡುವಿಕೆ ತಗ್ಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಜೂನ್ 7 ರ ಬಳಿಕವೂ ಕರ್ಫ್ಯೂ ಮುಂದುವರಿಕೆ ಬೇಡ. ರೋಗ ನಿಯಂತ್ರಣ ಆಗಿರುವ ಜಿಲ್ಲೆಗಳನ್ನು ಕರ್ಫ್ಯೂ ಮುಕ್ತ ಮಾಡಬೇಕು" ಎಂದು ಸಲಹೆ ನೀಡಿದರು.
ಇನ್ನು "ಕೊರೊನಾ ಕರ್ಫ್ಯೂ ಕಾರಣದಿಂದ ಸಾಮಾನ್ಯ, ಬಡ-ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಜೀವನ ನಿರ್ಹಣೆಗೆ ಪರದಾಡುತ್ತಿದ್ದಾರೆ. ಹೀಗಾಗಿ ಉದ್ಯೋಗ ಸೃಷ್ಟಿಗೂ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಬೇಕು" ಎಂದು ಆಗ್ರಹಿಸಿದ್ದಾರೆ.