ತಿರುವನಂತರಪುಂ, ಮೇ.31 (DaijiworldNews/HR): ಲಕ್ಷದ್ವೀಪ ಸಮೂಹದಲ್ಲಿ ಅಲ್ಲಿನ ನಿವಾಸಿಗಳ ಜೀವನ ಶೈಲಿ ಹಾಗೂ ಪರಿಸರ ವ್ಯವಸ್ಥೆಯನ್ನು ನಾಶಗೊಳಿಸುವ ಕ್ರಮಗಳನ್ನು ಕೈಗೊಂಡಿರುವ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಕೋರಿ ಕೇರಳ ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ್ದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳು ದ್ವೀಪ ಸಮೂಹದಲ್ಲಿನ ಸ್ಥಳೀಯ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವಂತದಾಗಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಅವರನ್ನು ವಾಪಸ್ ಕರೆಸಿಕೊಂಡು, ದ್ವೀಪವಾಸಿಗಳ ಜೀವನ ಮತ್ತು ಜೀವನವನ್ನು ರಕ್ಷಿಸಲು ಕೇಂದ್ರ ಮಧ್ಯಪ್ರವೇಶಿಸುವಂತೆ ನಿರ್ಣಯದಲ್ಲಿ ಕೋರಲಾಗಿದೆ.
ಇನ್ನು ಈಗ ಕೈಗೊಂಡಿರುವ ಕ್ರಮಗಳು ದ್ವೀಪ ಸಮೂಹದಲ್ಲಿ ಹಿಂಬಾಗಿಲಿನ ಮೂಲಕ 'ತನ್ನ ಕೇಸರಿ ಕಾರ್ಯಸೂಚಿ'ಯನ್ನು ಜಾರಿಗೆ ತರುವ ಪ್ರಯತ್ನವಾಗಿದ್ದು, ಈ ಮೂಲಕ ಸ್ಥಳೀಯ ಜನರ ಜೀವನದ ಹಕ್ಕನ್ನು ನಿಯಂತ್ರಿಸಲಾಗುತ್ತಿದ್ದು, ಈ ಕಾರ್ಯಸೂಚಿಯ ಒಂದು ಉದಾಹರಣೆಯಾಗಿ ನಾವು ಅಲ್ಲಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಿರುವುದನ್ನು ಕಾಣಬಹುದು. ಇದನ್ನು ನಾವು ವಿರೋಧಿಸುತ್ತೇವೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು "ಲಕ್ಷದ್ವೀಪದಲ್ಲಿ ಕೇಸರಿ ಕಾರ್ಯಸೂಚಿ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರಲು ಮತ್ತು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ"ಎಂದು ಆರೋಪಿಸಿದ್ದು, ಕೇಂದ್ರ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಕು. ಲಕ್ಷದ್ವೀಪ ಜನರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಒತ್ತಾಯಿಸಿದ್ದಾರೆ.