ಬಲರಾಮ್ ಪುರ, ಮೇ.31 (DaijiworldNews/HR): ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿರುವ ರಾಪ್ಟಿ ನದಿ ಸೇತುವೆ ಮೇಲಿಂದ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಮೃತ ದೇಹವನ್ನು ಎತ್ತಿ ನದಿಗೆ ಹಾಕುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಮೇ.25 ರಂದು ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರೇಮ್ ನಾಥ್ ಮಿಶ್ರ ಮೇ.29 ರಂದು ಮೃತಪಟ್ಟಿದ್ದು, ಕೊರೊನಾ ಶಿಷ್ಟಾಚಾರಗಳನ್ನು ಪಾಲಿಸಿ ಅವರ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು ಎಂದು ಬಲರಾಮ್ ಪುರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಮೇ.29 ರಂದು ಪಿಪಿಇ ಧರಿಸಿದ್ದ ಇಬ್ಬರು ವ್ಯಕ್ತಿಗಳು ರಾಪ್ಟಿ ನದಿ ಸೇತುವೆಯಿಂದ ಮೃತ ದೇಹವನ್ನು ನದಿಗೆ ಎಸೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.