ಕೊಪ್ಪಳ, ಮೇ.30 (DaijiworldNews/HR): ಹತ್ತು ವರ್ಷಗಳ ಬಳಿಕ ಜುಮಲಾಪೂರ ಗ್ರಾಮದ ಯುವಕನೊಬ್ಬ ಮರಳಿ ಮನೆಗೆ ಬಂದಿರುವ ಘಟನೆ ನಡೆದಿದ್ದು, ಕುಟುಂಬದವರೆಲ್ಲ ಸಂತಸ ಪಟ್ಟಿದ್ದಾರೆ.
ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಗುರುಬಸಪ್ಪ ಹಾಗೂ ಪಾರ್ವತಮ್ಮ ದಂಪತಿಯ ಪುತ್ರ ದೇವರಾಜ (30) ಹತ್ತು ವರ್ಷದ ನಂತರ ಮರಳಿ ಮನೆಗೆ ಬಂದಿದ್ದಾನೆ.
ಬಾಲ್ಯದಲ್ಲಿ ತಂದೆ, ತಾಯಿ ಜೊತೆ ವಾಗ್ವಾದ ಮಾಡಿಕೊಂಡು ಊರು ಬಿಟ್ಟು ತೆರಳಿದ್ದು, ಇದೀಗ ಕೊರೊನಾದಿಂದಾಗಿ ಕಂಪೆನಿಗಳು ಮುಚ್ಚಿರುವ ಕಾರಣ ತಮ್ಮ ಸ್ನೇಹಿತರ ಸಹಾಯದಿಂದ ಮನೆಗೆ ಮರಳಿದ್ದಾರೆ ಎನ್ನಲಾಗಿದೆ.
ದೇವರಾಜ್ ಅವರು ಉದ್ಯೋಗವನ್ನು ಹುಡುಕುತ್ತಾ 2008-09ರಲ್ಲಿ ಬೆಂಗಳೂರಿಗೆ ತೆರಳಿ ಆ ಬಳಿಕ ತನ್ನ ಮನೆಯವನ್ನು ಸಂಪರ್ಕಗಳನ್ನು ಕಳೆದುಕೊಂಡಿದ್ದರು. ಆಮೇಲೆ ಆತನನ್ನು ಹುಡುಕಲು ಮನೆಯವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಿಕ್ಕಿರಲಿಲ್ಲ.
ಇದೀಗ ಹತ್ತು ವರ್ಷದ ಬಳಿಕ ಮಗ ಮನೆಗೆ ಬಂದಾಗ ಆಶ್ಚರ್ಯದ ಜೊತೆಗೆ ಸಂತೋಷ ವ್ಯಕ್ತಪಡಿಸಿದಾಗ ಯುವಕ ಭಾವುಕನಾದ ಘಟನೆ ನಡೆದಿದೆ.
ಇನ್ನು ತಂದೆ, ತಾಯಿಗೆ ತಮ್ಮ ಮಗ ಮನೆ ಸೇರಿರುವುದು ಒಂದೆಡೆ ಸಂತೋಷ ಉಂಟು ಮಾಡಿದ್ದು, ಕುಟುಂಬ ಸದಸ್ಯರನ್ನು ಬಿಟ್ಟು ಹೋಗಿದ್ದ ದೇವರಾಜನಿಗೆ ಮರಳಿ ಮನೆ ಸೇರುವುದು ಖುಷಿ ತಂದಿದೆ.