ನವದೆಹಲಿ, ಮೇ.30 (DaijiworldNews/HR): ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ 7 ವರ್ಷ ಪೂರೈಸಿದ್ದು, ಈ ಏಳು ವರ್ಷಗಳಲ್ಲಿ ಸಂಪೂರ್ಣ ಶಾಂತಿ ಮತ್ತು ಸೌಹಾರ್ದತೆಯಿಂದ ಅನೇಕ ಹಳೆಯ ಸಂಕಷ್ಟ, ಸವಾಲು-ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ತಮ್ಮ 77ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ಕುರಿತು ಮಾತನಡಿದ ಅವರು, "ಕಳೆದ 7 ವರ್ಷಗಳಲ್ಲಿ ಡಿಜಿಟಲ್ ವಹಿವಾಟುಗಳಲ್ಲಿ ದೇಶ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಿದ್ದು, ಇಂದು ಜಗತ್ತಿನ ಯಾವ ಸ್ಥಳದಲ್ಲಿ ಕುಳಿತುಕೊಂಡು ಬೇಕಾದರೂ ನಾವು ಸುಲಭವಾಗಿ ಡಿಜಿಟಲ್ ಮೂಲಕ ಪಾವತಿ ಮಾಡಬಹುದು. ಕೊರೊನಾ ಸಮಯದಲ್ಲಿ ಡಿಜಿಟಲ್ ವಹಿವಾಟಿನ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ಗೊತ್ತಾಗಿರಬಹುದು" ಎಂದರು.
ಭಾರತಕ್ಕೆ ಕೊರೊನಾದ ಮೊದಲ ಅಲೆ ಬಂದಾಗ ನಾವೆಲ್ಲ ಸಂಪೂರ್ಣ ಧೈರ್ಯದಿಂದ ಹೋರಾಡಿದ್ದೇವೆ. ಈ ಬಾರಿ ಕೂಡ ಹೋರಾಟದಲ್ಲಿ ಭಾರತ ವಿಜಯಿಯಾಗಲಿದೆ. ಯಶಸ್ಸು ಇರುವಲ್ಲಿ ಪ್ರಯೋಗಗಳು ಕೂಡ ಇರುತ್ತದೆ. ಯಶಸ್ಸಿಗೆ ಹಲವು ಅಡೆ-ತಡೆಗಳು ಎದುರಾಗಬಹುದು. ಈ ಏಳು ವರ್ಷಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹಲವು ಸಂಕಷ್ಟ ಸಮಯಗಳನ್ನು ಎದುರಿಸಿದ್ದೇವೆ" ಎಂದಿದ್ದಾರೆ.
ಇನ್ನು ಆಕ್ಸಿಜನ್ ಎಕ್ಸ್ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳೆಯರೇ ನಿಭಾಯಿಸುತ್ತಿರುವ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ ಮೋದಿ, "ದೇಶದ ಪ್ರತಿಯೊಬ್ಬ ಮಹಿಳೆಗೂ ಇದು ಹೆಮ್ಮೆಯ ವಿಚಾರವಾಗಿದ್ದು, ರಾಷ್ಟ್ರದ ಎಲ್ಲ ತಾಯಂದಿರು, ಸೋದರಿಯರಿಗೆ ಖುಷಿ ನೀಡುವಂತದ್ದು. ಕೇವಲ ಮಹಿಳೆಯರಿಗೆ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಚಾರವಾಗಿದೆ" ಎಂದರು.
"ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಹಳ್ಳಿ ಹಳ್ಳಿಗೆ ತಲುಪಿದ್ದು, ಇಂದು ವಿದ್ಯುತ್ ಬೆಳಕಿನಲ್ಲಿ ಅನೇಕ ಮಕ್ಕಳು ಓದುತ್ತಿದ್ದಾರೆ. ಫ್ಯಾನ್ ಕೆಳಗೆ ಕುಳಿತುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಇನ್ನು ಇಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳನ್ನು ಪೂರೈಸಿದ್ದು, ಇದೇ ಹೊತ್ತಿಗೆ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ದೇಶ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ನಡೆದುಕೊಂಡು ಮುಂದೆ ಸಾಗುತ್ತಿದೆ" ಎಂದು ತಿಳಿಸಿದ್ದಾರೆ.