ಬಾಗಲಕೋಟೆ, ಮೇ.30 (DaijiworldNews/HR): "ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಬೇಕೆಂದು ಹಾತೊರೆಯುತ್ತಿದ್ದಾರೆ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಾ ನಾನೇ ಮುಂದಿನ ಸಿಎಂ ಎಂದು ಹೇಳುತ್ತಿದ್ದಾರೆ. ಮೊದಲಿಗೆ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕಾರಜೋಳ, "ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದ್ದು, ಸಿದ್ದರಾಮಯ್ಯ ಅನಾವಶ್ಯಕವಾಗಿ ಪ್ರಧಾನಿ ಮೋದಿ, ಸಿಎಂ ಬಿ.ಎಸ್.ವೈ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಿದ್ದರಾಮಯ್ಯ ಟೀಕೆ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಲಿ. ಅವರ ಸಲಹೆಗಳನ್ನು ನಾವು ಸ್ವೀಕರಿಸುತ್ತೇವೆ" ಎಂದರು.
ಇನ್ನು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಕಾರಜೋಳ, "ಮುಖ್ಯಮಂತ್ರಿ ಬದಲಾವಣೆ ಕೇವಲ ಗಾಳಿ ಸುದ್ದಿ. ಕೊರೊನಾ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ. ಬದಲಾವಣೆ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದಾರೆ.