ನವದೆಹಲಿ, ಮೇ.30 (DaijiworldNews/HR): ಕೊರೊನಾದಿಂದಾಗಿ ದೇಶದಲ್ಲಿ ಅನೇಕ ಕಾರ್ಮಿಕರು ಮೃತಪಟ್ಟಿದ್ದು, ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90 ರಷ್ಟು ಪಿಂಚಣಿ ರೂಪದಲ್ಲಿ ನೀಡಲಾಗುವುದು. ಕಳೆದ ವರ್ಷ ಮಾರ್ಚ್ 24 ರಿಂದ ಅನ್ವಯವಾಗುವಂತೆ ನಿಯಮ ಜಾರಿಗೆ ಬರಲಿದ್ದು, 2022 ರ ಮಾರ್ಚ್ 24 ರ ವರೆಗಿನ ಪ್ರಕರಣಗಳಿಗೆ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ನೌಕರರ ಠೇವಣಿ ಆಧಾರಿತ ವಿಮೆ ಯೋಜನೆಯಲ್ಲಿ ವಿಮಾ ಮೊತ್ತವನ್ನು 7 ಲಕ್ಷ ರೂಪಾಯಿಗೆ ಹೆಚ್ಚು ಮಾಡಲಾಗಿದ್ದು, ಇದರಿಂದ ಕೊರೊನಾದಿಂದ ಮೃತಪಟ್ಟವ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಕಾರ್ಮಿಕ ಸಚಿವಾಲಯ ಯೋಜನೆ ಕುರಿತ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎನ್ನಲಾಗಿದೆ.