ಬೆಂಗಳೂರು, ಮೇ.29 (DaijiworldNews/HR): ಕೊರೊನಾದಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ 'ಮುಖ್ಯಮಂತ್ರಿ ಬಾಲಸೇವಾ ಯೋಜನೆ' ಜಾರಿಗೆ ತರಲಿದ್ದು, ತಿಂಗಳಿಗೆ 3,500 ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದ್ದು, "ಕೊರೊನಾದಿಂದ ಅನಾಥರಾದ 10 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುವುದು" ಎಂದಿದೆ.
ಇನ್ನು "21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ ಅಥವಾ ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು" ಎಂದು ಸರ್ಕಾರ ಹೇಳಿದೆ.