ಬೆಂಗಳೂರು, ಮೇ.29 (DaijiworldNews/HR): "ಕರ್ನಾಟಕದಲ್ಲಿ ಜೂನ್ 7ರವರೆಗೆ ಲಾಕ್ಡೌನ್ ಜಾರಿಯಲ್ಲಿ ಇರಲಿದ್ದು, ಅಲ್ಲಿಯವರೆಗಿನ ಸ್ಥಿತಿಗತಿ ಅವಲೋಕಿಸಿ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಕೊರೊನಾ ಹೆಚ್ಚಿರುವ ಜಿಲ್ಲೆಗಳಾದ ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ ಮತ್ತು ವಿಜಯಪುರದ ಸಂಸದರು ಮತ್ತು ಶಾಸಕರ ಜೊತೆ ಶನಿವಾರ ಸುಮಾರು ಎರಡೂವರೆ ಗಂಟೆ ವಿಡಿಯೊ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಪಾಸಿಟಿವಿಟಿ ದರ ಶೇ 10 ಕ್ಕಿಂತ ಕಡಿಮೆ ಮಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಮರಣ ಪ್ರಮಾಣ ರಾಜ್ಯದಲ್ಲಿ ಶೇ 1.7 ರಷ್ಟಿದ್ದು, ಅದನ್ನು ಕಡಿಮೆ ಮಾಡಬೇಕು" ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಒಟ್ಟು ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳ ಪೈಕಿ, ಬೆಂಗಳೂರು ನಗರ, ಮೈಸೂರು, ತುಮಕೂರು, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶೇ 60 ವರದಿಯಾಗುತ್ತಿದ್ದು, ಇದನ್ನು ಕಡಿಮೆಗೊಳಿಸಬೇಕು. ಸೋಂಕು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಸೂಚಿಸಿದರು.
ಇನ್ನು "ಕೊರೊನಾದ ಎರಡನೇ ಅಲೆ, ನಿರೀಕ್ಷೆಗೂ ಮೀರಿ ಹೆಚ್ಚಿದ್ದು, ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿತರಿಗೆ ಮನೆಯಲ್ಲೇ ಆರೈಕೆ ನೀಡುವ ಬದಲು ಕೊರೊನಾ ಆರೈಕೆ ಕೇಂದ್ರಗಳಿಗೆ ದಾಖಲಿಸಲು ಮನವೊಲಿಸಬೇಕು" ಎಂದು ಹೇಳಿದ್ದಾರೆ.
"ಆಶಾ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆಗೆ ಕ್ರಮ ವಹಿಸಲಾಗಿದ್ದು, ಎರಡು ಮೂರು ದಿನಗಳಲ್ಲಿಯೇ ವೇತನ ಪಾವತಿ ಆಗಲಿದೆ" ಎಂದು ಅವರು ತಿಳಿಸಿದ್ದಾರೆ.