ನವದೆಹಲಿ, ಮೇ.29 (DaijiworldNews/HR): ರಾಜ್ಯಗಳಿಗೆ ನೀಡಲು ಸಾಕಷ್ಟು ಲಸಿಕೆಗಳ ದಾಸ್ತಾನಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಲಸಿಕೆ ಡೋಸ್ಗಳನ್ನು ಹೇಗೆ ಪಡೆಯುತ್ತಿವೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾದಿದ ಅವರು, "ಲಸಿಕೆ ವಿತರಣಾ ವ್ಯವಸ್ಥೆಯ ವಿಚಾರದಲ್ಲಿ ಕೇಂದ್ರವು ಮೊಂಡುತನ ಪ್ರದರ್ಶಿಸುತ್ತಿದ್ದು, ರಾಜ್ಯಗಳಿಗೆ ನೀಡಲು ತನ್ನ ಬಳಿ ಸಾಕಷ್ಟು ಲಸಿಕೆಗಳ ದಾಸ್ತಾನಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ, ಆದರೆ ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳು ಲಸಿಕೆ ಡೋಸ್ ಗಳನ್ನು ಹೇಗೆ ಪಡೆಯುತ್ತಿವೆ" ಎಂದು ಪ್ರಶ್ನಿಸಿದ್ದಾರೆ
ಇನ್ನು "18 ರಿಂದ 44 ವಯಸ್ಸಿನವರಿಗೆ ಲಸಿಕೆಗಳು ಜೂನ್ನಲ್ಲಿ ಲಭ್ಯವಿರುತ್ತವೆ ಎಂದು ಕೇಂದ್ರವು ನಮಗೆ ತಿಳಿಸಿದ್ದು, ಆದರೆ ಜೂನ್ 10 ರ ಮೊದಲು ನಾವು ಅವುಗಳನ್ನು ಪಡೆಯಲು ಸಾಧ್ಯವಿಲ್ಲ" ಎಂದರು.
"ಕೇಂದ್ರದಿಂದ ಮುಂದಿನ ತಿಂಗಳು 18 ರಿಂದ 44 ವಯಸ್ಸಿನ ಫಲಾನುಭವಿಗಳಿಗಾಗಿ ದೆಹಲಿಯು 5.5 ಲಕ್ಷ ಕೊರೊನಾ ಲಸಿಕೆಗಳನ್ನು ಪಡೆಯುವ ನಿರೀಕ್ಷೆಯಿದ್ದು, ದೆಹಲಿಯಲ್ಲಿ 18-44 ವಯಸ್ಸಿನ 92 ಲಕ್ಷ ಜನರಿಗೆ ಲಸಿಕೆ ಹಾಕಲು 1.84 ಕೋಟಿ ಡೋಸ್ಗಳ ಅವಶ್ಯಕತೆ ಇದೆ" ಎಂದು ತಿಳಿಸಿದ್ದಾರೆ.