ಬೆಂಗಳೂರು, ಮೇ.29 (DaijiworldNews/HR) : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿ.ಡಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ತಪ್ಪನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರ ಸಿಗದ ಕಾರಣ ಎಸ್ಐಟಿ ಅಧಿಕಾರಿಗಳು 'ಬಿ' ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿ.ಡಿ ಸಂತ್ರಸ್ತೆಯು ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿಯ 376 ಸಿ, 354 ಎ, 504, 506, 417 ಮತ್ತು 67 ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ ಎಸ್ಐಟಿಯ ಅಧಿಕಾರಿ, "ಸಿಡಿ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ. ಸಿಡಿಯಲ್ಲಿಯುವ ಯುವತಿಯು ಜಾರಕಿಹೊಳಿಯನ್ನು ಪದೇ ಪದೇ ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಲಭ್ಯವಿರುವ ವೀಡಿಯೊದಲ್ಲಿ ರಮೇಶ್ ಜಾರಕಿಹೊಳಿ ಯುವತಿಯನ್ನು ಒತ್ತಾಯಿಸುವ ಅಥವಾ ಕಿರುಕುಳ ನೀಡುವ ಯಾವುದೇ ದೃಶ್ಯಗಳು ಕಂಡುಬರುವುದಿಲ್ಲ, ಇಬ್ಬರ ಸಹಮತದಿಂದಲೇ ಕ್ರಿಯೆ ನಡೆದಿದೆ" ಎಂದರು.
ಪ್ರಕರಣ ಸಂಬಂಧ ಸಾಕಷ್ಟು ಜನರ ಹೇಳಿಕೆಯನ್ನೂ ಎಸ್ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಇರುವುದು ನಾನಲ್ಲ. ವಿಡಿಯೋ ನಕಲಿ ಸೃಷ್ಟಿಯಾಗಿದೆ ಎಂದು ಇಷ್ಟು ದಿನ ಹೇಳಿಕೊಂಡು ಬಂದಿದ್ದ ಜಾರಕಿಹೊಳಿಯವರು ಕೆಲ ದಿನಗಳ ಹಿಂದಷ್ಟೇ ಎಸ್ಐಟಿ ಮುಂದೆ ಹಾಜರಾಗಿ ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಇನ್ನು ಜಾರಕಿಹೊಳಿಯವರು ಹನಿ ಟ್ರ್ಯಾಪ್’ಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳೂ ನ್ಯಾಯಾಲಯಕ್ಕೆ ಶೀಘ್ರದಲ್ಲಿಯೇ ಬಿ ರಿಪೋರ್ಟ್ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.
ಸಿಡಿ ಪ್ರಕರಣದ ಪ್ರಮುಖ ಕಿಂಗ್ ಪಿನ್ಗಳೆಂದು ಹೇಳಲಾಗಿದ್ದ ನರೇಶ್ ಹಾಗೂ ಶ್ರವಣ್ ತಲೆ ಮರೆಸಿಕೊಂಡಿದ್ದು, ಈವರೆಗೂ ಪತ್ತೆಯಾಗಿಲ್ಲ. ಸದಾಶಿವನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಂಧನ ಭೀತಿಯಲ್ಲಿರುವ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬೇಲ್ ಸಿಗುವುದು ಅನುಮಾನ ಎನ್ನಲಾಗಿದೆ.