ಬೆಂಗಳೂರು, ಮೇ 29 (DaijiworldNews/MS): ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡುವ ಸುಳಿವನ್ನು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ನೀಡಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟದ ಬಳಿಕ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಸದ್ಯಕ್ಕೆ ಜೂನ್ 7 ರ ವರೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ವಿಸ್ತರಣೆ ಮಾಡುವ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂತ್ರಿ ಮಂಡಲದ ಹಾಗೂ ತಜ್ಞರ ಸಭೆ ನಡೇಸಿ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದ್ದರೂ, ದೇಶದಲ್ಲಿ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿರುವುದರಿಂದ , ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು, ಕಠಿಣ ನಿಯಮ ಹಾಗೂ ಲಾಕ್ ಡೌನ್ ಜೂನ್ 30 ರವರೆಗೆ ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವೂ ಸೂಚಿಸಿದೆ. ಕೇಂದ್ರದ ಹೊಸ ಆದೇಶದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಸಚಿವರ ಸಭೆ ನಡೆಸಲು ನಿರ್ಧರಿಸಿದ್ದಾರೆ.
"ಸದ್ಯಕ್ಕೆ ಜೂನ್ 7ರವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಯಲ್ಲಿ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಿಲ್ಲ. ಅದು ಶೇಕಡ 10ಕ್ಕಿಂತಲೂ ಕಡಿಮೆ ವರಬೇಕಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕೋವಿಡ್ ಪ್ರಮಾಣ ಮತ್ತು ಸಾವುಗಳ ಸಂಖ್ಯೆ ನಿಯಂತ್ರಣಕ್ಕೆ ಬಂದರೆ ಮಾತ್ರ ಸಾಂಕ್ರಮಿಕ ರೋಗದ ಹತೋಟಿ ಸಾದ್ಯ" ಎಂದು ಹೇಳಿದ್ದಾರೆ.