ನವದೆಹಲಿ, ಮೇ.29 (DaijiworldNews/HR): ಯೋಗಗುರು ರಾಮದೇವ್ ಅವರು ಅಲೋಪಥಿ ಮತ್ತು ವೈಜ್ಞಾನಿಕ ವೈದಕೀಯ ಪದ್ಧತಿಯ ವಿರುದ್ಧ ಹೇಳಿಕೆಯನ್ನು ನೀಡಿರುವುದಕ್ಕೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಸಾರ್ವಜನಿಕ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಆಹ್ವಾನಿಸುವ ಮೂಲಕ ಸವಾಲೆಸೆದಿದೆ ಎಂದು ತಿಳಿದು ಬಂದಿದೆ.
ರಾಮದೇವ್ ಅವರು ಅಲೋಪಥಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪ್ರಶ್ನಿಸಿದ್ದು, ಈ ಚಿಕಿತ್ಸಾ ವಿಧಾನದಿಂದ ಲಕ್ಷಾಂತರ ಮಂದಿ ಸಾಯುವಂತಾಗಿದೆ ಎಂದು ಆರೋಪಿಸಿದ್ದರು.
ಇನ್ನು ರಾಮದೇವ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಉತ್ತರಾಖಂಡದ ಐಎಂಎ ಅಧ್ಯಕ್ಷ ಡಾ. ಅಜಯ್ ಖನ್ನಾ, ಯೋಗಗುರು ಹೇಳಿಕೆಯು ಉದ್ಧಟತನ, ಬೇಜವಾಬ್ದಾರಿ ಮತ್ತು ಸ್ವಾರ್ಥದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದು, ಎಲೆಕ್ಟ್ರಾನಿಕ್ ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಐಎಂಎ ಹಾಗೂ ಪತಂಜಲಿ ಯೋಗಪೀಠದ ನಡುವೆ ಬಹಿರಂಗ ಚರ್ಚೆ ನಡೆಯಲಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಆರೋಗ್ಯಕರ ಚರ್ಚೆ, ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಸ್ಥಳವನ್ನು ನಾವು ನಿರ್ಧರಿಸಲಿದ್ದೇವೆ ಎಂದು ಐಎಂಎ ತಿಳಿಸಿದೆ.
ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ತಪ್ಪಾದ ಅಭಿಯಾನ ನಡೆಸುತ್ತಿರುವ ರಾಮದೇವ್ ವಿರುದ್ದ ದೇಶದ್ರೋಹ ಆರೋಪದ ಅಡಿಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಐಎಂಎ ಆಗ್ರಹಿಸಿತ್ತು ಎನ್ನಲಾಗಿದೆ.