ಬೆಂಗಳೂರು, ಮೇ.29 (DaijiworldNews/HR): ಕರ್ತವ್ಯದ ವೇಳೆ ಮರಣ ಹೊಂದಿರುವ ಕೊರೊನಾ ವಾರಿಯರ್ಸ್ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಕುಟುಂಬದವರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, "ಕೊರೊನಾ ವಾರಿಯರ್ಸ್ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಕೊರೊನ ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿಗಳ ತಳ ಮಟ್ಟದ ಸಿಬ್ಬಂದಿಗಳು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು, ಪಶುವೈದ್ಯರು ಮುಂತಾದವರು ನೇರವಾಗಿ ಜನರ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ವಿಶೇಷ ರಕ್ಷಣೆಯನ್ನು ನೀಡಬೇಕಾಗಿರುವುದು ಸರ್ಕಾರದ ಜವಾಬ್ಧಾರಿ" ಎಂದರು.
ಇನ್ನು ಜನರ, ರೋಗಿಗಳ ಸಂಪರ್ಕದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸರ್ಕಾರದ ತಳ ಮಟ್ಟದ ಸಿಬ್ಬಂದಿಗಳಿಗೆ ಕೊರೊನಾದಿಂದ ರಕ್ಷಣೆ ಪಡೆಯಲು ನೀಡಬೇಕಾದ ಮಾಸ್ಕ್, ಸ್ಯಾನಿಟೈಸರ್, ಮುಂತಾದ ಮೂಲಭೂತವಾದ ಸಾಮಗ್ರಿಗಳನ್ನೂ ನೀಡಿಲ್ಲ. ಕೊರೊನ ವಾರಿಯರ್ಸ್ ಎಂದು ಘೋಷಣೆ ಮಾಡಲಾದವರಲ್ಲಿ ಕೆಲವರು ಮರಣ ಹೊಂದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಅನೇಕ ಮಂದಿ ಕೊರೊನಾಗೆ ಬಲಿಯಾಗಿದ್ದು, ಅವರಲ್ಲಿ ಪರಿಹಾರ ಸಿಕ್ಕಿರುವುದು ಕೇವಲ ಮೂರು ಜನರ ಕುಟುಂಬಗಳಿಗೆ ಮಾತ್ರ. ಎಲ್ಲ ಇಲಾಖೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತಿರುವ ಇವರೆಲ್ಲರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯವಾಗಿದೆ" ಎಂದಿದ್ದಾರೆ.
"ಆಶಾ, ಅಂಗನವಾಡಿ ಕಾರ್ಯಕರ್ತೆಯರೆಲ್ಲರಿಗೆ ಸೂಕ್ತವಾದ, ಗೌರವಯುತವಾದ ಸಂಬಳ, ಗೌರವಧನ, ಸಂಭಾವನೆಯನ್ನು ಹೆಚ್ಚಿಸಬೇಕು. ಮಾರಣಾಂತಿಕವಾದ ಸೋಂಕನ್ನು ನಿಭಾಯಿಸುವಲ್ಲಿ ಮಾನವ ಸಂಪನ್ಮೂಲದ ಪಾತ್ರ ಬಹಳ ದೊಡ್ಡದು. ಅವರುಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕಾದುದು ಸರ್ಕಾರದ ಜವಾಬ್ಧಾರಿ" ಎಂದು ಪತ್ರದಲ್ಲಿ ಹೇಳಿದ್ದಾರೆ.