ಬೆಂಗಳೂರು, ಮೇ 29 (DaijiworldNews/MS): ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ದ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸರ್ಕಾರದಿಂದ ನೀಡಲಾಗುತ್ತಿರುವ ಉಚಿತ ವ್ಯಾಕ್ಸಿನ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಮಿಷನ್ ಪಡೆದು ಮಾರಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎನ್ನುವವರು ಆರೋಪ ಮಾಡಿದ್ದಾರೆ.
ಶಾಸಕ ರವಿ ಸುಬ್ರಹ್ಮಣ್ಯ, ಪ್ರತಿ ಡೋಸ್ ಲಸಿಕೆಗೆ 700 ರೂಪಾಯಿನಂತೆ ಆಸ್ಪತ್ರೆಯಿಂದ ಕಮಿಷನ್ ಪಡೆದು ಅನುಗ್ರಹ ವಿಠಲ ಆಸ್ಪತ್ರೆಗೆ ವ್ಯಾಕ್ಸಿನ್ ಮಾರಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಆರೋಪಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕು ಆಧಾರಿಸಿ ಈ ಆರೋಪ ಮಾಡಲಾಗಿದೆ .
ಅನುಗ್ರಹ ವಿಠಲ ಖಾಸಗಿ ಆಸ್ಪತ್ರೆಯೂ ಪ್ರತಿ ಡೋಸ್ ಲಸಿಕೆಗೆ 900 ರೂ. ಜಾರ್ಜ್ ಮಾಡುತ್ತಿದ್ದು, ಅದರಲ್ಲಿ ಸೇವಾ ಶುಲ್ಕ ೨೦೦ ಮಾತ್ರ ಆಸ್ಪತ್ರೆಗೆ ಹಾಗೂ ಉಳಿದ 700 ರೂಪಾಯಿನ್ನು ಕಮಿಷನ್ ರೂಪದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಸಂದಾಯ ಮಾಡಬೇಕಿತ್ತು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರವಿ ಸುಬ್ರಹ್ಮಣ್ಯ, ಇದು ತನ್ನ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಗುಡುಗಿದ್ದಾರೆ.ಲಸಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಮಹಾನುಭಾವ ಯಾರೆಂಬುದು ನನಗೆ ಗೊತ್ತಿಲ್ಲ. ನಮ್ಮ ಕೈಯಿಂದಲೇ ಹಣ ಖರ್ಚುಮಾಡಿ ಲಸಿಕೆ ತರಿಸಿ ಜನರ ಜೀವ ಉಳಿಸುವ ಯತ್ನ ಮಾಡುತ್ತಿದ್ದೇವೆ ಹೊರತು ಉಚಿತವಾಗಿ ನೀಡುವ ಲಸಿಕೆಗೂ ಕಮಿಷನ್ ಪಡೆಯುವ ಕೆಲಸ ಮಾಡುತ್ತಿಲ್ಲ. ಆರೋಪ ಮಾಡಿದಾತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದಿದ್ದಾರೆ.