ನವದೆಹಲಿ, ಮೇ 29 (DaijiworldNews/MS): ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 173,790 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 46 ದಿನಗಳಲ್ಲಿ ದಾಖಲಾಗುತ್ತಿರುವ ದೈನಂದಿನ ಪ್ರಕರಣಗಳ ಸಂಖ್ಯೆಗಿಂತ ಕಡಿಮೆ ಎಂಬುವುದು ಸಮಾಧಾನಕರ ಸಂಗತಿಯಾಗಿದೆ . ಅದಾಗ್ಯೂ, ದೈನಂದಿನ ಸಾವಿನ ಸಂಖ್ಯೆ 3,000 ಕ್ಕಿಂತಲೂ ಹೆಚ್ಚಾಗಿದೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 3,617 ಸಾವುಗಳು ಸಂಭವಿಸಿದೆ. ದೇಶದಲ್ಲಿ 27,729,247 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 2,84,601 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೊಸ ಸೋಂಕಿನ ಇಳಿಕೆಯಿಂದಾಗಿ ದೈನಂದಿನ ಪಾಸಿಟಿವಿಟಿ ದರ ಶೇ. 9.84ಕ್ಕೆ ಇಳಿಕೆಯಾಗಿದೆ. ಸತತ 5 ದಿನಗಳಿಂದ ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನಿನ್ನೆಯೊಂದೇ ದಿನ 20,80,048 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ 34,11,19,909 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆಎಂದು ಐಸಿಎಂಆರ್ ಮಾಹಿತಿ ನೀಡಿದೆ.
ತಮಿಳುನಾಡು ರಾಜ್ಯವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 31,079 ಪ್ರಕರಣಗಳು ವರದಿಯಾಗಿದ್ದು, ರಾಜ್ಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಕರ್ನಾಟಕವು 22,823 ಹೊಸ ಪ್ರಕರಣ ಹೊಂದಿದೆ. ಕೇರಳದಲ್ಲಿ 22,318 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ 20,740, ಮತ್ತು ಆಂಧ್ರಪ್ರದೇಶ 14,429 ಪ್ರಕರಣಗಳು ಪತ್ತೆಯಾಗಿದೆ.