ಬೆಂಗಳೂರು, ಮೇ 29 (DaijiworldNews/MS): ಬಿಜೆಪಿ ಹಿರಿಯ ನಾಯಕ, ಹಾನಗಲ್ ವಿಧಾನಸಭೆ ಕ್ಷೇತ್ರದ ಶಾಸಕ, ಸಿ.ಎಂ. ಉದಾಸಿ ಅವರ ಅನಾರೋಗ್ಯಕ್ಕೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಆಸ್ಪತ್ರೆಯಲ್ಲಿ 77 ವರ್ಷದ ಉದಾಸಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಟ್ವಿಟರ್ ನಲ್ಲಿ ಅವರ ಪುತ್ರ ಹಾಗೂ ಸಂಸದ ಶಿವಕುಮಾರ್ ಉದಾಸಿ ಮಾಹಿತಿ ನೀಡಿದ್ದು, ನಿರಂತರವಾಗಿ ವೈದ್ಯರ ಆರೈಕೆಯಲ್ಲಿರುವ ಅವರ ಆರೋಗ್ಯ ಸುಧಾರಣೆಗಾಗಿ ನಮ್ಮೆಲ್ಲರ ಪ್ರಾರ್ಥನೆ ಅವರೊಂದಿಗೆ ಇರಲಿ ಎಂದಿದ್ದಾರೆ.
ರಕ್ತ ಸಂಬಂಧಿ ಸಮಸ್ಯೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಉದಾಸಿ ಅವರು ಅನಾರೋಗ್ಯ ಹಿನ್ನೆಲೆ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಉದಾಸಿ ಅವರ ಆರೋಗ್ಯ ವಿಚಾರಿಸಿದ್ದಾರೆ.