ನವದೆಹಲಿ, ಮೇ 29 (DaijiworldNews/MS): ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದ್ದರೂ, ದೇಶದಲ್ಲಿ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿರುವುದರಿಂದ , ಕೊರೊನಾ ಹರಡುವುದನ್ನು ತಡೆಯಲು ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು, ಕಠಿಣ ನಿಯಮ ಹಾಗೂ ಲಾಕ್ ಡೌನ್ ಜೂನ್ 30 ರವರೆಗೆ ವಿಸ್ತರಿಸುವಂತೆ ಕೇಂದ್ರ ಗೃಹ ಸಚಿವಾಲಯವೂ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಏಪ್ರಿಲ್ 29ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ್ದ ಆಜ್ಞೆಯಂತೆ ಮತ್ತು ಏಪ್ರಿಲ್ 25ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದ್ದ ಮಾರ್ಗಸೂಚಿಗಳಂತೆ ಕೊವಿಡ್-19 ಸೋಂಕು ತಡೆಯ ಮಾರ್ಗಸೂಚಿಗಳು ಜೂನ್ 30ರ ವರೆಗೆ ಊರ್ಜಿತವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿರುವ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ
ಕೊರೊನಾ ಸೋಂಕಿನ ವಿರುದ್ಧ ಕೈಗೊಂಡ ಕಠಿಣ ನಿಯಮಾವಳಿಗಳು, ಕಂಟೈನ್ಮೆಂಟ್ ಮತ್ತು ಇತರ ನಿಯಮಾವಳಿಗಳಿಂದಾಗಿ ಹೊಸ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ. ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಇನ್ನಷ್ಟು ಇಳಿಕೆಯಾಗಬೇಕಿದೆ. ಹಾಗಾಗಿ, ಸೂಕ್ತ ನಿಯಮಗಳನ್ನು ಮುಂದುವರಿಸಲು ಪತ್ರದಲ್ಲಿ ಹೇಳಲಾಗಿದೆ.
ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹೊರಡಿಸಲಾದ ಹೊಸ ಮಾರ್ಗಸೂಚಿಗಳಲ್ಲಿ ಭಾರತದಲ್ಲಿ ಎಲ್ಲಿಯೂ ಹೊಸದಾಗಿ ಲಾಕ್ಡೌನ್ ಹೇರುವ ಬಗ್ಗೆ ಗೃಹ ಸಚಿವಾಲಯ ಏನನ್ನೂ ಉಲ್ಲೇಖಿಸಿಲ್ಲ.ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು, ಪ್ರಭಾವ ಕಡಿಮೆ ಮಾಡಲು ಜೂನ್ 30ರ ವರೆಗೆ ಕಠಿಣ ನಿಯಮಾವಳಿ ಮುಂದುವರಿಸುವಂತೆ ಸಲಹೆ ನೀಡಲಾಗಿದೆ. ನಿಯಮಾವಳಿಗಳಲ್ಲಿ ಯಾವುದೇ ಸಡಿಲಿಕೆ ಮಾಡುವುದಿದ್ದರೂ ಪರಿಸ್ಥಿತಿ ಅವಲೋಕಿಸಿ ಅದನ್ನು ಹಂತಹಂತವಾಗಿ, ಮಾಡಬೇಕು ಎಂದು ಹೇಳಿದೆ.