ನವದೆಹಲಿ, ಮೇ.28 (DaijiworldNews/HR): ಯಾಸ್ ಚಂಡಮಾರುತ ತೊಂದರೆಗೊಳಗಾದವರಿಗೆ ಪರಿಹಾರಕ್ಕಾಗಿ 1000 ಕೋಟಿ ರೂ. ಇಟ್ಟಿದ್ದು, ಅದರಲ್ಲಿ ಒಡಿಶಾಗೆ 500 ಕೋಟಿ ರೂ., ಉಳಿದ 500 ಕೋಟಿ ರೂ.ಗಳನ್ನು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ಹಾನಿಯ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುವುದು, ಇದನ್ನು ಕೇಂದ್ರವು ನಿಯೋಜಿಸಿರುವ ಜಡ-ಮಂತ್ರಿಮಂಡಲದ ತಂಡವು ಮೌಲ್ಯಮಾಪನ ಮಾಡುತ್ತದೆ" ಎಂದರು.
ಮೃತ ವ್ಯಕ್ತಿಯ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಚಂಡಮಾರುತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಪರಿಶೀಲಿಸಲು ಮೋದಿ ಇಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಒಡಿಶಾದ ಭದ್ರಾಕ್ ಮತ್ತು ಬಾಲೇಶ್ವರ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಪುರ್ಬಾ ಮೆಡಿನಿಪುರದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು.
ಇನ್ನು ಯಾಸ್ ಚಂಡಮಾರುತದಿಂದ ಒಡಿಶಾದಲ್ಲಿ ಗರಿಷ್ಠ ಹಾನಿ ಸಂಭವಿಸಿದೆ ಮತ್ತು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನ ಕೆಲವು ಭಾಗಗಳಿಗೆ ತೊಂದರೆಯಾಗಿದೆ ಎಂದು ಪ್ರಧಾನಮಂತ್ರಿಗೆ ತಿಳಿಸಲಾಯಿತು.