ಶಿವಮೊಗ್ಗ, ಮೇ.28 (DaijiworldNews/HR): "ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮೇಲೆ ನಂಬಿಕೆ ಇಲ್ಲದಿದ್ದರೆ ಸಿ. ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಚಿವ ಯೋಗೇಶ್ವರ್ ಅವರು ಸ್ವತಃ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದು, ಆ ಬಳಿಕ ಮತ್ತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ" ಎಂದರು.
ಇನ್ನು ಕರ್ನಾಟಕ ಬಿಜೆಪಿಯ ಎಲ್ಲಾ ಶಾಸಕರು ಕಲ್ಲು ಬಂಡೆಗಳಂತೆ ಒಗ್ಗಟ್ಟಾಗಿ ಇದ್ದೇವೆ, ಹಾಗಾಗಿ ಕೇಂದ್ರ ನಾಯಕರು ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ" ಎಂದಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಈಶ್ವರಪ್ಪ, "ಕಾಂಗ್ರೆಸ್ನವರಿಗೆ ಜನರು ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಮತ್ತೆ ಯಾವಾಗ ಸಿಎಂ ಕುರ್ಚಿ ಮೇಲೆ ಕೂರುತ್ತೇವೆ ಎಂದು ಕಾದು ಕೂತಿದ್ದಾರೆ" ಎಂದು ಹೇಳಿದ್ದಾರೆ.