ಕೋಲ್ಕತ್ತಾ, ಮೇ.28 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ಯಾಸ್ ಚಂಡಮಾರುತ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪಾಲ್ಗೊಂಡಿರಲಿಲ್ಲ. ಉಳಿದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖಾರ್, ಬಿಜೆಪಿ ಮುಖಂಡ ಸುವೇಂಧು ಅಧಿಕಾರಿ, ರಾಜ್ಯ ನೀರಾವರಿ ಸಚಿವ ಸೌಮೆನ್ ಮಹಾಪಾತ್ರ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದರು.
30 ನಿಮಿಷಗಳ ಕಾಲ ತಡವಾಗಿ ಪರಿಶೀಲನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಯಾಸ್ ಚಂಡಮಾರುತದ ಪರಿಣಾಮ ಉಂಟಾಗಿರುವ ಹಾನಿಯ ಕುರಿತು ಪ್ರಧಾನಿ ಮೋದಿ ಅವರಿಗೆ ವರದಿ ನೀಡಿದ್ದು, ನನಗೆ ಬೇರೆ ಸಭೆಗಳು ನಿಗದಿಯಾಗಿವೆ. ಹಾಗಾಗಿ ನಾನು ಅಲ್ಲಿಗೆ ತೆರಳುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
"ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಕರೆದಿದ್ದರು. ಆದರೆ, ದಿಘಾದಲ್ಲಿ ಸಭೆ ಇರುವ ಬಗ್ಗೆ ನಮಗೆ ತಿಳಿದಿರಲಿಲ್ಲ. ಕಲೈಕುಂಡಕ್ಕೆ ತೆರಳಿ ನಾನು ಪ್ರಧಾನಿ ಮೋದಿ ಅವರಿಗೆ ವರದಿ ನೀಡಿದ್ದೇನೆ. ದಿಘಾ ಅಭಿವೃದ್ಧಿ ಹಾಗೂ ಸುಂದರಬನ್ ಅಭಿವೃದ್ಧಿಯ ನಿಟ್ಟಿನಲ್ಲಿ 20,000 ಕೋಟಿ ರೂ. ಹಾಗೂ 10000 ಕೋಟಿ ರೂ. ಅನ್ನು ಕೇಳಿದ್ದೇವೆ. ನಾಳೆ ನಾನು ಮತ್ತೆ ಚಂಡಮಾರುತದಿಂದ ಹಾನಿ ಉಂಟಾದ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸುತ್ತೇನೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದಕ್ಕೂ ಮೊದಲು ಮಮತಾ ಬ್ಯಾನರ್ಜಿ ಅವರು ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರೊಂದಿಗೆ ಉತ್ತರ 24 ಪರಗಣ ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು, ಹಿಂಗಲ್ಗಂಜ್, ಹಸ್ನಾಬಾದ್, ಸಂದೇಶ್ಖಾಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಚಂಡಮಾರುತದ ನಂತರದ ಪರಿಸ್ಥಿತಿ ವೀಕ್ಷಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, "ಪ್ರಧಾನಿ ಮೋದಿ ಅವರು ಕರೆದ ಸಭೆಗೆ ಪಾಲ್ಗೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಈ ಹಿನ್ನೆಲೆ ನಾನು ಯಾಸ್ ಚಂಡಮಾರುತದಿಂದ ಹಾನಿಯಾಗಿರುವ ಕುರಿತು ಪಶ್ಚಿಮ ಬಂಗಾಳದಲ್ಲಿ ಪ್ರಾಥಮಿಕ ವರದಿಯನ್ನು ಸಿದ್ದಪಡಿಸಿದ್ದು, ಪ್ರದಾನಿ ಮೋದಿ ಅವರಿಗೆ ಆ ವರದಿಯನ್ನು ತಲುಪಿಸುತ್ತೇನೆ" ಎಂದು ತಿಳಿಸಿದ್ದರು.