ನವದೆಹಲಿ, ಮೇ 28 (DaijiworldNews/MS): ಕೊರೋನಾ ಸೋಂಕಿನ ಮೂಲವನ್ನು ಪತ್ತೆಹಚ್ಚಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಪ್ತಚರ ಇಲಾಖೆಗೆ ನೀಡಿದ್ದ ಆದೇಶಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಈ ಹಿಂದೆ ಜಾಗತಿಕ ಒತ್ತಾಯಕ್ಕೆ ಮಣಿದು ಒತ್ತಾಯಕ್ಕೆ ಮಣಿದು ಕೊರೊನಾ ವೈರಸ್ ನ ಮೂಲ ಪತ್ತೆ ಹೊರಟಿತ್ತು. ಆದರೆ ಅದರ ಮುಂದುವರಿದ ಭಾಗದ ಶೋಧದ ಅಗತ್ಯವಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಅಮೆರಿಕ ವಿಜ್ಞಾನಿಗಳು ಮತ್ತು ತಜ್ಞರು ನಡೆಸುತ್ತಿರುವ ಶೋಧ ಕಾರ್ಯವನ್ನು ಚುರುಕುಗೊಳಿಸಿ 90 ದಿನಗಳಲ್ಲಿ ಅದರ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರವಷ್ಟೇ ಸೂಚಿಸಿದ್ದರು.
ಇದಲ್ಲದೆ ಅಂತಾರಾಷ್ಟ್ರೀಯ ತನಿಖೆಯಲ್ಲಿ ಭಾಗವಹಿಸಿ ಪಾರದರ್ಶಕ, ಸಾಕ್ಷ್ಯ ಆಧಾರಿತ ಎಲ್ಲಾ ಪೂರಕ ದತ್ತಾಂಶ ಮತ್ತು ಸಾಕ್ಷಿಗಳ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವಂತೆ ಚೀನಾವನ್ನು ಒತ್ತಾಯಿಸಲು ಅಮೆರಿಕ ವಿಶ್ವದಾದ್ಯಂತ ಸಮಾನ ಮನಸ್ಕ ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಬೈಡೆನ್ ಹೇಳಿದ್ದರು.
ಇದೀಗ ಜೋ ಬೈಡನ್ ಅವರ ಈ ನಿರ್ಧಾರಕ್ಕೆ ಭಾರತ ಬೆಂಬಲಿಸಿದ್ದು, ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು, ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನ ವರದಿಯ ಮುಂದುವರಿದ ಭಾಗವಾಗಿ ಶೋಧ ಕಾರ್ಯದ ಅಗತ್ಯತೆ ಇದ್ದು, ಈ ಸಂಬಂಧ ಎಲ್ಲ ದೇಶಗಳ ಸಹಕಾರ ಅತ್ಯಗತ್ಯ ಎಂದು ತಿಳಿಸಿದ್ದಾರೆ.