ನವದೆಹಲಿ, ಮೇ.28 (DaijiworldNews/HR): ಕೊರೊನಾ ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯುತ್ತಿಲ್ಲ, ನಿಧಾನಗತಿಯಲ್ಲಿ ಲಸಿಕೆ ನೀಡಲಾಗುತ್ತಿದೆ ಮತ್ತು ಲಸಿಕೆ ಕೊರತೆ ಇದೆ ಎನ್ನುವ ಟೀಕೆಗಳು ಕೇಳಿ ಬರುತ್ತಿದ್ದು, ದೇಶದಲ್ಲಿನ ಕೊರೊನಾ ಲಸಿಕೆ ಅಭಿಯಾನದ ಕುರಿತು ಅರ್ಧ ಸತ್ಯ ಮತ್ತು ಸುಳ್ಳಿನ ಕಂತೆಗಳನ್ನು ಹಬ್ಬಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
"ಲಸಿಕೆ ಅಭಿಯಾನಕ್ಕೆ ರಾಜ್ಯ ಸರ್ಕಾರಗಳೇ ಹೊಣೆಯಾಗಿದ್ದು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಿಧಾನಗತಿಯಲ್ಲಿ ಲಸಿಕೆ ಹಾಕಿದ ರಾಜ್ಯ ಸರ್ಕಾರಗಳು, ಲಸಿಕೆ ಪ್ರಕ್ರಿಯೆಯನ್ನು ಮುಕ್ತಗೊಳಿಸಬೇಕು ಮತ್ತು ವಿಕೇಂದ್ರೀಕರಣಗೊಳಿಸಬೇಕು ಎಂದು ಒತ್ತಾಯಿಸಿದವು" ಎಂದು ಕೊರೊನಾ ಲಸಿಕಾ ಅಭಿಯಾನ ಕುರಿತ ರಾಷ್ಟ್ರೀಯ ತಜ್ಞರ ತಂಡದ ಅಧ್ಯಕ್ಷ ಹಾಗೂ ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ರಾಜ್ಯ ಸರ್ಕಾರಗಳಿಗೆ ದೇಶದಲ್ಲಿ ಲಸಿಕೆ ಉತ್ಪಾದನೆಯ ಸಾಮರ್ಥ್ಯದ ಮಾಹಿತಿ ತಿಳಿದಿದ್ದು, ವಿದೇಶದಿಂದ ಲಸಿಕೆ ಆಮದು ಮಾಡಿಕೊಳ್ಳಲು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಸಹ ರಾಜ್ಯಗಳಿಗೆ ಗೊತ್ತಿದೆ' ಎಂದರು.
ಇನ್ನು ಫೈಜರ್, ಮಾಡರ್ನಾ ಹಾಗೂ ಜಾನ್ಸನ್ ಮತ್ತು ಜಾನ್ಸನ್ ಕಂಪನಿಗಳ ಜತೆ ಕೇಂದ್ರ ಸರ್ಕಾರ 2020ರ ಜೂನ್ನಿಂದಲೇ ಸಂಪರ್ಕದಲ್ಲಿದೆ. ಆದರೆ, ಈ ಕಂಪನಿಗಳಿಗೆ ತಮ್ಮದೇ ಆದ ಆದ್ಯತೆಗಳಿವೆ ಮತ್ತು ಒತ್ತಡಗಳಿವೆ ಎಂದು ತಿಳಿಸಿದ್ದಾರೆ.
ಲಸಿಕೆ ಪೂರೈಕೆ ವಿಷಯದಲ್ಲಿ ಕೇವಲ ಕೇಂದ್ರ ಸರ್ಕಾರದ ಜತೆ ಮಾತ್ರ ವ್ಯವಹಾರ ನಡೆಸಲಾಗುವುದು, ರಾಜ್ಯ ಸರ್ಕಾರಗಳು ಅಥವಾ ಖಾಸಗಿ ಆಸ್ಪತ್ರೆಗಳ ಜತೆ ವ್ಯವಹಾರ ನಡೆಸುವುದಿಲ್ಲ ಎಂದು ಫೈಜರ್ ಕಂಪನಿ ಸ್ಪಷ್ಟಪಡಿಸಿದೆ.