ಬೆಂಗಳೂರು, ಮೇ.28 (DaijiworldNews/PY): "ಬಿಜೆಪಿ ಒಡೆದ ಮನೆಯಾಗಿದೆ. ಅಧಿಕಾರ ದಾಹದಿಂದ ಸ್ವತಃ ಸಚಿವರು,ಶಾಸಕರು ಪರಸ್ಪರ ಕಿತ್ತಾಡುತ್ತಿದ್ದಾರೆ. ಬಿಜೆಪಿಯವರ ಅಧಿಕಾರದ ಆಸೆ ಕೊರೊನಾ ಸಾಂಕ್ರಾಮಿಕಕ್ಕಿಂತಲೂ ಅಪಾಯಕಾರಿ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಿಜೆಪಿ ಒಡೆದ ಮನೆಯಾಗಿದೆ. ಅಧಿಕಾರ ದಾಹದಿಂದ ಸ್ವತಃ ಸಚಿವರು,ಶಾಸಕರು ಪರಸ್ಪರ ಕಿತ್ತಾಡುತ್ತಿದ್ದಾರೆ. ರಾಜ್ಯ ಸಂಕಷ್ಟದಲ್ಲಿರುವಾಗ ಯಾವುದೇ ಸರ್ಕಾರ ಜನರ ನೆರವಿಗೆ ನಿಲ್ಲಬೇಕು. ಆದರೆ ಈ ಸರ್ಕಾರದಲ್ಲಿರುವ ಬಿಜೆಪಿ ನಾಯಕರಿಗೆ ಜನಹಿತಕ್ಕಿಂತ ಸ್ವಹಿತ ಮತ್ತು ಸ್ವಾರ್ಥವೇ ಮುಖ್ಯವಾಗಿದೆ. ಈ ಸರ್ಕಾರ ನಾಡಿನ ಜನರ ಪಾಲಿನ ನಿಜವಾದ ದುರಂತ" ಎಂದಿದ್ದಾರೆ.
"ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ರಚನೆಯಾದ ಈ ಸರ್ಕಾರ ಹೆಚ್ಚು ಬಾಳಿಕೆ ಬರದ ಸರ್ಕಾರವಾಗುವುದು ಖಚಿತ. ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಜಗಳ ಶುರುವಾಗಿದೆ. ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಬಿಜೆಪಿಯವರಿಗೆ ರಾಜ್ಯದ ಕೊರೊನಾ ಪರಿಸ್ಥಿತಿಯ ಬಗ್ಗೆ ಚಿಂತೆಯೇ ಇಲ್ಲ. ಬಿಜೆಪಿಯವರ ಅಧಿಕಾರದ ಆಸೆ ಕೊರೊನಾ ಸಾಂಕ್ರಾಮಿಕಕ್ಕಿಂತಲೂ ಅಪಾಯಕಾರಿ" ಎಂದು ಹೇಳಿದ್ದಾರೆ.