ನವದೆಹಲಿ, ಮೇ.28 (DaijiworldNews/PY): "ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ವಲಯಗಳನ್ನು ಪುನರಾರಂಭಿಸಬಹುದು" ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.
"ದೊಡ್ಡ ಪರಿಶ್ರಮದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಕೊರೊನಾ ವಿರುದ್ದದ ಹೋರಾಟದಲ್ಲಿ ಸಂಪೂರ್ಣವಾದ ಗೆಲುವು ದೊರೆತಿಲ್ಲ" ಎಂದಿದ್ದಾರೆ.
"ದೆಹಲಿಯಲ್ಲಿ ಲಾಕ್ಡೌನ್ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತದೆ. ಮೊದಲು ಬಡವರು, ದಿನಗೂಲಿ ನೌಕಕರು ಹಾಗೂ ಪ್ರವಾಸಿ ಕಾರ್ಮಿಕರಿಗೆ ಆದ್ಯತೆ ನೀಡಲಾಗುವುದು. ಹಾಗಾಗಿ ಸೋಮವಾರದಿಂದ ಕಟ್ಟಡ ಕಾಮಗಾರಿ ಹಾಗೂ ಫ್ಯಾಕ್ಟರಿಗಳನ್ನು ತೆರೆಯಬಹುದಾಗಿದೆ. ಮುಂದಿನ ವಾರ ಮತ್ತೆರಡು ವಲಯಗಳು ಅನ್ಲಾಕ್ ಆಗಲಿವೆ" ಎಂದು ಹೇಳಿದ್ದಾರೆ.
"ಈ ವಾರ ಅನ್ಲಾಕ್ ಪ್ರಕ್ರಿಯೆ ನಂತರ ಜನರ ಹಾಗೂ ತಜ್ಞರ ಸಲಹೆ ಪಡೆದುಕೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಒಂದು ವೇಳೆ ಕೊರೊನಾ ಹರಡುವ ಪ್ರಮಾಣ ಹೆಚ್ಚಾದಲ್ಲಿ ಅನ್ಲಾಕ್ ಪ್ರಕ್ರಿಯೆಯನ್ನು ರದ್ದು ಮಾಡಲಾಗುವುದು. ಈ ಹಿನ್ನೆಲೆ ದೆಹಲಿ ಜನತೆ ಅನ್ಲಾಕ್ನ ಸಂದರ್ಭ ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರ ಜೊತೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು" ಎಂದು ಮನವಿ ಮಾಡಿದ್ದಾರೆ.