ಬೆಂಗಳೂರು, ಮೇ.28 (DaijiworldNews/HR): ಬಾಂಗ್ಲಾ ಮೂಲದ ಯುವತಿಯ ಮೇಲೆ ಅಮಾನವೀಯ ಕೃತ್ಯಗಳನ್ನು ಎಸಗುವ ವಿಡಿಯೋ ಮಾಡಿ ಹರಿಯಬಿಟ್ಟ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬೆಂಗಳೂರು ಪೊಲೀಸರು ಬಂಧಿಸಿದ್ದು, ಇದೀಗ ಸಂತ್ರಸ್ತ ಯುವತಿಯನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆ ಯುವತಿಯು ಘಟನೆ ಬಳಿಕ ತನ್ನ ಸ್ನೇಹಿತ ಲಕ್ಷ್ಮೀಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದು, ಸದ್ಯ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರಿಗೆ ಸಂತ್ರಸ್ತೆ ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಾಹಿತಿ ತಿಳಿದು ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಮಹಿಳಾ ಪಿಎಸ್ಐ ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದೆ.
ಇನ್ನು ಗ್ಯಾಂಗ್ರೇಪ್ ಮತ್ತು ಹಲ್ಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು, ಇಂದು ಬೆಳಗ್ಗೆ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸುವಾಗ ಪರಾರಿಯಾಗಲೆತ್ನಿಸಿದ ಇಬ್ಬರಿಗೆ ಗುಂಡೇಟು ಬಿದ್ದಿದೆ.
ಬಂಧಿತರಲ್ಲಿ ಇಬ್ಬರು ಮಹಿಳೆಯರಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರೆಲ್ಲ ಒಂದೇ ಗುಂಪಿನವರಾಗಿದ್ದು ಬಾಂಗ್ಲಾದೇಶದವರಾಗಿದ್ದರು. ವೇಶ್ಯಾವಾಟಿಕೆಗಾಗಿ ಸಂತ್ರಸ್ತೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲಾಗಿದ್ದು, ಹಣಕಾಸಿನ ವಿಷಯದಿಂದಾಗಿ ಇವರ ನಡುವೆ ಜಗಳ ಶುರುವಾಗಿ ಅದು ಇಂತಹ ಕೃತ್ಯದ ಮೂಲಕ ಕೊನೆಯಾಗಿದೆ.
ಇನ್ನು ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ರೇಪ್ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.