ದೆಹಲಿ, ಮೇ 28 (DaijiworldNews/MS): ದೇಶದಲ್ಲಿ ಮೂರನೇ ಅಲೆ ಕೋವಿಡ್ ಬರಲಿದ್ದು, ಇದರಿಂದ ಮಕ್ಕಳಿಗೆ ಹಾನಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಬೆನ್ನಲ್ಲೇ 12-17 ವಯೋಮಾನದ ಮಕ್ಕಳಿಗೆ ತಕ್ಷಣವೇ ಕೋವಿಡ್ ಲಸಿಕೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.
12ರ ಹಾಗೂ 8 ವರ್ಷದ ಮಕ್ಕಳ ತಾಯಿಯಾದ ರೋಮಾ ರಹೇಜಾ ಅವರು ಅರ್ಜಿ ಸಲ್ಲಿಸಿದ್ದು , ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಚಾರದಲ್ಲಿ ಅವರ ಹೆತ್ತವರಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
“ವಯಸ್ಕರಂತೆ ಮಕ್ಕಳಿಗೂ ಮೂಲಭೂತ ಹಕ್ಕುಗಳಿವೆ. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. 'ವಿಪತ್ತು' ತಗ್ಗಿಸುವುದನ್ನು ಖಚಿತಪಡಿಸಿಕೊಳ್ಳಲು ರೋಗ ತಡೆಗಟ್ಟುವ ವೈದ್ಯಕೀಯ ಮೂಲಸೌಕರ್ಯ ಕ್ರಮಗಳ ಜೊತೆಗೆ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.