ಮಡಿಕೇರಿ, ಮೇ.28 (DaijiworldNews/HR): ಜಿಲ್ಲಾ ಕೊರೊನಾ ಆಸ್ಪತ್ರೆಯಲ್ಲಿ ಮೃತಪಟ್ಟವರಲ್ಲಿದ್ದ ಬೆಲೆ ಬಾಳುವ ವಸ್ತುಗಳು ಇನ್ನೂ ಕೂಡ ವಾರಸುದಾರರ ಕೈ ಸೇರುತ್ತಿಲ್ಲ ಎಂದು ಅನೇಕ ದೂರುಗಳು ಬಂದಿದ್ದು, ಈಗಾಗಲೇ ಓರ್ವ ಹೊರಗಿನ ಮೊಬೈಲ್ ಕಳ್ಳನನ್ನು ಬಂಧಿಸಿ ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಇದೀಗ ಕೊರೊನಾದಿಂದ ಮೃತಪಟ್ಟವರೊಬ್ಬರ ಪತ್ನಿ ತಮ್ಮ ಪತಿಯಿಂದ 11 ಸಾವಿರ ರೂಪಾಯಿ ಕಳುವಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ . ನಗದು ಕಳವು ಮಾಡಿದ್ದ ಆಸ್ಪತ್ರೆಯ ತಾತ್ಕಾಲಿಕ ಡಿ ಗ್ರೂಪ್ ಸಿಬ್ಬಂದಿ ಜೋಡುಪಾಲ ನಿವಾಸಿ ದಿಲ್ಶಾದ್ (45) ಬಂಧಿಸಿದ್ದಾರೆ.
ಇನ್ನು ಮೇ 9ರಂದು ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮದ ರಜನಿಕಾಂತ್ ಉಸಿರಾಟದ ಸಮಸ್ಯೆಯಿಂದ ಮಡಿಕೇರಿಯ ಜಿಲ್ಲಾ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಡ್ಗಳ ಕೊರತೆ ಎದುರಾಗಿರುವುದರಿಂದ ಇಲ್ಲಿಯೂ ಏನಾದರೂ ಸಮಸ್ಯೆ ಆಗಬಹುದೆಂಬ ಅನುಮಾನದಿಂದ ಸೋಂಕಿತ ರಜನಿಕಾಂತ್ಗೆ ಕುಟುಂಬಸ್ಥರು 11 ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದರು.
ರಜನಿಕಾಂತ್ ಅವರನ್ನು ಐಸಿಯು ವಾರ್ಡ್ಗೆ ಸ್ಥಳಾಂತರಿಸಲಾಗಿದ್ದು,. ಮೇ 20 ರ ಬೆಳಗ್ಗೆ 5.30ಕ್ಕೆ ರಜನಿಕಾಂತ್ ಪತ್ನಿ ಶೋಭಾಗೆ ಕರೆ ಮಾಡಿ, ಬೆಳಗೆ 4 ಗಂಟೆಗೆ ಡೈಪರ್ ಪ್ಯಾಡ್ ಬದಲಾಯಿಸಲು ಬಂದ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ತನ್ನ ಜೇಬಿನಲ್ಲಿದ್ದ 11 ಸಾವಿರ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದು, ಮೇ 23ರಂದು ರಜನಿಕಾಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಆದರೆ ರಜನಿಕಾಂತ್ ಜೇಬಿನಿಂದ ತೆಗೆಯಲಾಗಿದ್ದ ಹಣವನ್ನು ಇದುವರೆಗೂ ಯಾರೂ ಕೂಡ ಹಿಂದಿರುಗಿಸಿರಲಿಲ್ಲ, ಶೋಭಾ ಹೋಂ ಕ್ವಾರಂಟೈನ್ನಲ್ಲಿ ಇರುವುದರಿಂದ ಅವರ ಸಹೋದರ ಗಿರೀಶ್ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.
ದೂರಿನಂತೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ದಿಲ್ಶಾದ್ ಬಂಧಿಸಿದ್ದಾರೆ.