ನವದೆಹಲಿ, ಮೇ.28 (DaijiworldNews/HR): ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಸಹಚರರು ಕೊಲೆ ಆರೋಪದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದು, ಅವರು ಕೆಲವು ವ್ಯಕ್ತಿಗಳಿಗೆ ದೊಣ್ಣೆಯಿಂದ ಬಾರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಯದಿಂದ ಒದ್ದಾಡುತ್ತ ನೆಲಕ್ಕೆ ಉರುಳಿದ್ದು, ಸುಶೀಲ್ ಕುಮಾರ್ ಮತ್ತು ಅವರ ಸಹಚರರು ದೊಣ್ಣೆಗಳನ್ನು ಹಿಡಿದು ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನು ಛತ್ರಸಾಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ 23 ವರ್ಷದ ಕುಸ್ತಿಪಟು ಸಾಗರ್ ಸಾವನ್ನಪ್ಪಿದ್ದು, ಇದೇ ಪ್ರಕರಣದಲ್ಲಿ ಸುಶೀಲ್ ಕುಮಾರ್ ಸೇರಿದಂತೆ ಈವರೆಗೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಟೌನ್ ಪ್ರದೇಶದಲ್ಲಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೇ 4ರ ರಾತ್ರಿ ಜಗಳ ನಡೆದಿದ್ದು, ಭಾನುವಾರ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಯಿತು. ಅವರ ಸಹಚರರಾದ ಭೂಪೇಂದರ್ (38), ಮೋಹಿತ್ (22), ಗುಲಾಬ್ (24) ಅವರನ್ನು ಹರಿಯಾಣದ ಝಜ್ಜರ್ ಜಿಲ್ಲೆಯಿಂದ ಹಾಗೂ ರೋಹ್ಟಕ್ನಿಂದ ಮಂಜೀತ್ (29) ಎಂಬುವವರನ್ನು ಬಂಧಿಸಲಾಗಿದೆ.