ನವದೆಹಲಿ, ಮೇ.28 (DaijiworldNews/PY): ಭಾರತದಲ್ಲಿ ಸಿಂಗಲ್ ಡೋಸ್ ಕೊರೊನಾ ಲಸಿಕೆ ಸ್ಪುಟ್ನಿಕ್-ಲೈಟ್ ಅನ್ನು ಶೀಘ್ರವಾಗಿ ಬಿಡುಗಡೆಗೊಳಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ರಷ್ಯಾದ ಉತ್ಪಾದಕ, ಎಲ್ಲಾ ಪಾಲುದಾರರು ಹಾಗೂ ಅದರ ಭಾರತೀಯ ಪಾಲುದಾರಿಗೆ ನಿರ್ದೇಶನ ನೀಡಲಾಗಿದೆ. ಇದು ದೇಶದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಎರಡು ವಾರಗಳಲ್ಲಿ ಸ್ಪುಟ್ನಿಕ್ ಲೈಟ್ನ ಅನುಮೋದನೆ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಇದು ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಸಿಂಗಲ್-ಡೋಸ್ ಲಸಿಕೆ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಸ್ಪಟ್ನಿಕ್ ಲೈಟ್ ಲಸಿಕೆಯ ಅನುಮೋದನೆಗಾಗಿ ಕಳೆದ ವಾರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೂಡಲೇ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ, ಡಿಸಿಜಿಐ, ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳು, ಕೇಂದ್ರ ಆರೋಗ್ಯ ಸೇರಿದಂತೆ ಎಲ್ಲಾ ಸಂಬಂಧಪಟ್ಟ ಪಾಲುದಾರರ ಸಭೆಯನ್ನು ನಡೆಸಲು ಸೂಚಿಸಲಾಯಿತು.
"ಸ್ಪುಟ್ನಿಕ್ ಲಸಿಕೆ ಕುರಿತು ಈಗಾಗಲೇ ರಷ್ಯಾ ಅನುಮೋದಿಸಿದ್ದು, ಇತರ ದೇಶಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ 2-3 ವಾರಗಳಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆ ಅನುಮೋದನೆಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ" ಎಂದು ಡಿಸಿಜಿಐ ತಿಳಿಸಿದೆ.