ನವದೆಹಲಿ, ಮೇ.28 (DaijiworldNews/PY): ಡೊಮಿನಿಕಾದಲ್ಲಿ ಬಂಧನವಾಗಿರುವ ಡೈಮಂಡ್ ಉದ್ಯಮಿ ಮೆಹುಲ್ ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದಿರುವುದಕ್ಕೆ ಡೊಮಿನಿಕಾ ನ್ಯಾಯಾಲಯದಲ್ಲಿ ಅವರ ಪರ ವಕೀಲರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಚೋಕ್ಸಿ ಹಸ್ತಾಂತರ ಪ್ರತಿಕ್ರಿಯೆಗೆ ನ್ಯಾಯಾಲಯ ತಡೆ ನೀಡಿದೆ.
"ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗಾಗಿ ಕಾನೂನು ತಂಡ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಹಾಗೂ ಕಾನೂನು ಸಲಹೆ ಪಡೆಯುವ ಅವಕಾಶ ನಿರಾಕರಿಸಲಾಗಿದೆ. ಸಾಂವಿಧಾನಿಕ ಹಕ್ಕುಗಳ ಅಭಾವವನ್ನು ಇದು ಎತ್ತಿ ತೋರಿಸಿದೆ" ಎಂದು ಅವರ ಕಾನೂನು ಸಲಹೆಗಾರ ವಿಜಯ್ ಅಗರ್ವಾಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕಾನೂನು ತಂಡವು ಮೆಹುಲ್ ಚೋಕ್ಸಿ ಪರ ಡೊಮಿನಿಕಾದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಬಳಿಕ ಡೊಮಿನಿಕಾ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿದೆ. ಈ ಬಗ್ಗೆ ಮೇ 28ರ ಬೆಳಗ್ಗೆ 9 ಗಂಟೆಗೆ ಪುನಃ ವಿಚಾರಣೆಗೆ ಬರುವ ನಿರೀಕ್ಷೆ ಇದೆ.
"2018ರ ಜನವರಿಯಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ಕಳೆದ ಕೆಲ ದಿನಗಳ ಹಿಂದೆ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ನಾಪತ್ತೆಯಾಗಿದ್ದು, ಆಂಟಿಗುವಾ ಹಾಗೂ ಬಾರ್ಬುಡಾದಿಂದ ಪರಾರಿಯಾಗಿದ್ದರು. ಡೊಮಿನಿಕಾದಲ್ಲಿ ಅಕ್ರಮ ಪ್ರವೇಶದ ಕಾರಣದಿಂದ ಚೋಕ್ಸಿ ಅವರನ್ನು ಬಂಧಿಸಿರುವ ಬಗ್ಗೆ ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದು, ಡೊಮಿನಿಕಾದಲ್ಲಿ ಚೋಕ್ಸಿಯ ನಿಗೂಢ ಕಣ್ಮರೆ ಹಾಗೂ ಬಂಧನದ ವಿಚಾರ ಅನುಮಾನಾಸ್ಪದವಾಗಿದೆ" ಎಂದಿದ್ದಾರೆ.
"ಆಂಟಿಗುವಾ, ಬಾರ್ಬುಡಾ ಹಾಗೂ ಡೊಮಿನಿಕಾದಲ್ಲಿನ ಚೋಕ್ಸಿ ಪರ ವಕೀಲರು ಚೋಕ್ಸಿ ಅವರ ಕಾನೂನು ಸಂದರ್ಶನ ಪಡೆಯಲು ಯತ್ನಿಸಿದ್ದರು. ಆದರೆ, ಅವರ ಪ್ರವೇಶ ನಿರಾಕರಿಸಲಾಯಿತು. ಹೆಚ್ಚಿನ ಪ್ರಯತ್ನದ ಬಳಿಕ ಚೋಕ್ಸಿ ಜೊತೆ ಎರಡು ನಿಮಿಷ ಮಾತನಾಡಲು ಅವಕಾಶ ಸಿಕ್ಕಿತು. ಈ ವೇಳೆ, ಚೋಕ್ಸಿ ಅವರು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ನಡೆದ ಭಯಾನಕವಾದ ಅನುಭವವನ್ನು ಹೇಳಿದ್ದಾರೆ" ಎಂದು ಅಗರ್ವಾಲ್ ತಿಳಿಸಿದ್ದಾರೆ.
"ಚೋಕ್ಸಿ ಅವರನ್ನು ಆಂಟಿಗುವಾದಿಂದ ಕರೆದೊಯ್ದ ಬಳಿಕ ಅವರನ್ನು ಯಾವುದೋ ಸ್ಥಳದಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ಸೋಮವಾರ ಪೋಲಿಸ್ ಠಾಣೆಗೆ ಕರೆದೊಯ್ಯಲಾಯಿತು. ಅವರು ಅಂದಿನಿಂದಲೂ ಅಲ್ಲೇ ಇದ್ದಾರೆ. ಆದರೆ, ಈ ಬಗ್ಗೆ ಜಗತ್ತಿಗೆ ಬುಧವಾರ ತಿಳಿಯಿತು" ಎಂದಿದ್ಧಾರೆ.
"ಚೋಕ್ಸಿ ಅವರನ್ನು ಬೇರೆ ದೇಶಕ್ಕೆ ಕರೆದೊಯ್ಯುವ ಉಪಾಯವಿರಬಹುದು ಎಂದು ನಾನು ಊಹಿಸುತ್ತೇನೆ. ಹಾಗಾಗಿ ಅವರನ್ನು ಭಾರತಕ್ಕೆ ವಾಪಾಸ್ಸು ಕಳುಹಿಸುವ ಸಾಧ್ಯತೆ ಇದೆ. ಇದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ನನಗೆ ಗೊತ್ತಿಲ್ಲ. ಇದಕ್ಕೆ ಸಮಯವೇ ಉತ್ತರಿಸಲಿದೆ" ಎಂದು ತಿಳಿಸಿದ್ದಾರೆ.
ಮೆಹುಲ್ ಚೋಕ್ಸಿಯೊಂದಿಗೆ ಚುಟುಕು ಮಾತುಕತೆಗೆ ಅವಕಾಶ ಸಿಕ್ಕಿದ್ದನ್ನು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಡೊಮಿನಿಕಾದ ಅವರ ವಕೀಲ ವೇಯ್ನ್ ಮಾರ್ಷ್ ಅವರು ಹೇಳಿಕೊಂಡಿದ್ದಾರೆ. "ಆಂಟಿಗುವಾ ಹಾಗೂ ಬಾರ್ಬುಡಾದ ಜಾಲಿ ಹಾರ್ಬರ್ನಲ್ಲಿ ಭಾರತೀಯರಂತೆ ಕಾಣುವ ವ್ಯಕ್ತಿಗಳು ಹಾಗೂ ಆಂಟಿಗುವಾದ ಪೊಲೀಸರು ನನ್ನನ್ನು ಕರೆದೊಯ್ದಿದ್ದರು. ಬಳಿಕ ನನ್ನನ್ನು ಹಡಗಿನಲ್ಲಿ ಕೂರಿಸಿದ್ದರು" ಎಂದು ಚೋಕ್ಸಿ ಹೇಳಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾರ್ಷ್ ಮಾಹಿತಿ ನೀಡಿದ್ದು, "ಚೋಕ್ಸಿಯ ಕಣ್ಣುಗಳು ಊದಿಕೊಂಡು ಹಾಗೂ ನನ್ನ ಪ್ರಾಣಕ್ಕಾಗಿ ಭಯಗೊಂಡಿದ್ದ. ಅವರ ದೇಹದ ಮೇಲೆ ಗಾಯದ ಗುರುತುಗಳನ್ನು ಕಂಡಿದ್ದೇನೆ. ಮೆಹುಲ್ ಚೋಕ್ಸಿ ಅವರು ಆಂಟಿಗುವಾ ಹಾಗೂ ಬಾರ್ಬುಡಾದ ಪ್ರಜೆಯಾಗಿದ್ದಾರೆ. ಭಾರತಕ್ಕೆ ಅವರನ್ನು ವಾಪಾಸ್ಸು ಕಳುಹಿಸಲು ಅವರು ಭಾರತದ ಪ್ರಜೆಯಲ್ಲ" ಎಂದಿದ್ದಾರೆ.