ನವದೆಹಲಿ, ಮೇ.27 (DaijiworldNews/PY): ಆಧಾರ್ ಕಾರ್ಡ್ ಭಾರತದ ನಾಗರಿಕ ಗುರುತಿನ ಚೀಟಿ. ಆಧಾರ್ ಕಾರ್ಡ್ ಇಲ್ಲದೇ ಭಾರತದಲ್ಲಿ ಯಾವುದೇ ರೀತಿಯಾದ ಸರ್ಕಾರದ ಪ್ರಯೋಜನ ಪಡೆಯಲು ಆಗುವುದಿಲ್ಲ. ಅಲ್ಲಿಯವರೆಗೆ ಆಧಾರ್ ಕಾರ್ಡ್ ಮುಖ್ಯ.
ಸರ್ಕಾರ ಇದೀಗ ಆಧಾರ್ ಕಾರ್ಡ್ಗೆ ಸಂಬಂಧಪಟ್ಟಂತೆ ಕೆಲ ಬದಲಾವಣೆಗಳನ್ನು ತಂದಿದೆ. ಈ ವರ್ಷ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಪಿವಿಸಿ ಆಧಾರ್ ಕಾರ್ಡ್ ಅನ್ನು ನೀಡಲು ಮುಂದಾಗಿದೆ.
ಯುಐಡಿಎಐ ಆಧಾರ್ ಕಾರ್ಡ್ಗೆ ಸಂಬಂಧಪಟ್ಟಂತೆ ಜನರಿಗೆ ಹಲವು ಸೇವೆಗಳನ್ನು ಸುಲಭವಾಗಿಸಿದೆ. ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ಸಂಖ್ಯೆ, ಫೋಟೋ ಅಥವಾ ವಿಳಾಸವನ್ನು ಬದಲಾಯಿಸಬೇಕಾದಲ್ಲಿ, ಸಣ್ಣ ಪ್ರಕ್ರಿಯೆಯ ಮೂಲಕ ಕುಳಿತಲ್ಲಿಂದ ಮಾಡಬಹುದಾಗಿದೆ.
ಆದರೆ, ಆಧಾರ್ಗೆ ಸಂಬಂಧಿಸಿಂದಂತೆ ಯುಐಡಿಎಐ ಈಗ ಮುಖ್ಯವಾದ ಸೇವೆಯೊಂದನ್ನು ನಿಲ್ಲಿಸಿದೆ. ಇದಕ್ಕೂ ಮೊದಲು ಆಧಾರ್ ಕಾರ್ಡ್ ಹರಿದು ಹೋದಲ್ಲಿ ಅಥವಾ ಕಳೆದು ಹೋದಲ್ಲಿ ಯುಐಡಿಐಎ ವೆಬ್ ಸೈಟ್ ಮುಖೇನ ಹೊಸ ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದಾಗಿತ್ತು. ಆದರೆ, ಇನ್ನು ಮುಂದೆ ಈ ಸೌಲಭ್ಯವನ್ನು ಮಾಡಿಕೊಳ್ಳಲು ಆಗುವುದಿಲ್ಲ.
ಪಿವಿಸಿ ಆಧಾರ್ ಕಾರ್ಡ್ ಎಂದರೇನು?
ಯುಐಡಿಎಐ ಪಿವಿಸಿ ರೂಪದಲ್ಲಿ ಆಧಾರ್ ಕಾರ್ಡ್ ಅನ್ನು ತಯಾರಿಸುತ್ತಿದೆ. ಈ ಹಿಂದೆ ಇದ್ದ ದೊಡ್ಡ ಗಾತ್ರದ ಆಧಾರ್ ಕಾರ್ಡ್ ಮುದ್ರಣವನ್ನು ಯುಐಡಿಎಐ ಸ್ಥಗಿತಗೊಳಿಸಿದ್ದು, ಅದನ್ನು ಪಿವಿಸಿ ಆಧಾರ್ ಕಾರ್ಡ್ ರೂಪಕ್ಕೆ ಪರಿವರ್ತಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಡೆಬಿಡ್ ಕಾರ್ಡ್ ರೀತಿಯಲ್ಲಿ ಇರಲಿದೆ.
ಹಳೆಯ ಆಧಾರ್ ಕಾರ್ಡ್ ಅನ್ನು ಬದಲಾಯಿಸಿ ಪಿವಿಸಿ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಆದರೆ, ಪಿವಿಸಿ ಆಧಾರ್ ಕಾರ್ಡ್ಗೆ ಯುಐಡಿಎಐ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪಿವಿಸಿ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕಾದರೆ, ಯುಐಡಿಎಐ ವೆಬ್ ಸೈಟ್ uidai.gov.in ಅಥವಾ esident.uidai.gov.in ಗೆ ಭೇಟಿ ನೀಡಬೇಕು. ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ 50 ರೂ. ಶುಲ್ಕ ಪಾವತಿ ಮಾಡಬೇಕು. ಪೋಸ್ಟ್ ಮೂಲಕ ನಿಮ್ಮ ನೋಂದಾಯಿತ ವಿಳಾಸಕ್ಕೆ ನಿಮ್ಮ ಪಿವಿಸಿ ಆಧಾರ್ ಕಾರ್ಡ್ ತಲುಪಲಿದೆ.