ಬೆಂಗಳೂರು, ಮೇ.27 (DaijiworldNews/PY): "ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕು ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬ್ಗಗೆ ಸರಣಿ ಟ್ವೀಟ್ ಮಾಡಿರುವ ಅವರು, "ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಎಸ್.ಐ.ಟಿ ಮುಖ್ಯಸ್ಥರು ರಜೆ ಮೇಲೆ ತೆರಳಿ, ತನಿಖೆ ಸ್ಥಗಿತಗೊಂಡಿರುವುದರಿಂದ, ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕು ಹಾಗೂ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಆಗ್ರಹಿಸಿದ್ದಾರೆ.
"ಅತ್ಯಾಚಾರ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯನ್ನು ಭೇಟಿಯಾಗಿ, ಚರ್ಚೆ ನಡೆಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.
"ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಯಾರೆಲ್ಲಾ ಮಂತ್ರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡುತ್ತಿದ್ದಾರೆ ಅವರೆಲ್ಲರ ಹೆಸರುಗಳನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಮತ್ತು ಅಂಥವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪಅವರನ್ನು ಒತ್ತಾಯಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಅತ್ಯಾಚಾರ ಪ್ರಕರಣ ದಾಖಲಾಗಿ, ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ ಎದುರು ರಮೇಶ್ ಜಾರಕಿಹೊಳಿ ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿದ ಮೇಲೆಯೂ ಜಾರಕಿಹೊಳಿಯನ್ನು ಪೊಲೀಸರು ಏಕೆ ಬಂಧಿಸಿಲ್ಲ? ಅತ್ಯಾಚಾರ ಆರೋಪಿಯೊಬ್ಬ ಸ್ವಚ್ಛಂದವಾಗಿ ಓಡಾಡಿಕೊಂಡಿರಲು ರಾಜ್ಯ ಸರ್ಕಾರದ ಕೃಪಾಕಟಾಕ್ಷ ಕಾರಣವಲ್ಲದೆ ಇನ್ನೇನು?" ಎಂದು ಪ್ರಶ್ನಿಸಿದ್ದಾರೆ.
"ಅತ್ಯಾಚಾರ ಆರೋಪಿಯಾದ ರಮೇಶ್ ಜಾರಕಿಹೊಳಿ ಕಳೆದ ಶನಿವಾರ ರಾಜ್ಯದ ಗೃಹ ಸಚಿವರನ್ನು ಭೇಟಿಮಾಡಿ, ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದ್ದಾರೆ. ಅತ್ಯಾಚಾರ ಆರೋಪಿಯೊಬ್ಬ ಗೃಹ ಸಚಿವರನ್ನು ಭೇಟಿಮಾಡಿ, ಮಾತುಕತೆ ನಡೆಸಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು" ಎಂದಿದ್ದಾರೆ.
"ಸಿ.ಆರ್.ಪಿ.ಸಿ ಸೆಕ್ಷನ್ 53(A) ಪ್ರಕಾರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಒಳಪಡಿಸಬೇಕು ಎಂದಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಇಷ್ಟು ದಿನ ಕಳೆದರೂ ಈ ವರೆಗೆ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸದಿರಲು ಕಾರಣವೇನು ಬಿಜೆಪಿ?" ಎಂದು ಕೇಳಿದೆ.
"ತನ್ನ ರಾಸಲೀಲೆ ಸಿಡಿ ಹೊರಬಂದಾಗ ಸಿಡಿ ಯಲ್ಲಿರುವುದು ನಾನಲ್ಲ, ನನಗೂ ವೀಡಿಯೋಗೂ ಸಂಬಂಧವೇ ಇಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ, ನಿನ್ನೆ ಸಿಡಿಯಲ್ಲಿರುವುದು ನಾನೇ ಎಂದು ಎಸ್.ಐ.ಟಿ ಮುಂದೆ ಒಪ್ಪಿಕೊಂಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಂದರೆ ಇದು ಅತ್ಯಾಚಾರವನ್ನು ಒಪ್ಪಿಕೊಂಡಂತೆ ಅಲ್ಲವೇ ಬಿಜೆಪಿ?" ಎಂದು ಪ್ರಶ್ನಿಸಿದೆ.
"ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳುವ ಮೊದಲೇ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಸೌಮೇಂಧು ಮುಖರ್ಜಿ ಅವರನ್ನು ಸರ್ಕಾರ ರಜೆಯ ಮೇಲೆ ಕಳುಹಿಸಿದೆ. ಇದು ರಾಜ್ಯ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ತನಿಖೆಯನ್ನು ವಿಳಂಬ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ" ಎಂದು ಕಿಡಿಕಾರಿದ್ದಾರೆ.
"ಸಿ.ಆರ್.ಪಿ.ಸಿ ಸೆಕ್ಷನ್ 173 (1)(A) ಪ್ರಕಾರ ಅತ್ಯಾಚಾರ ಪ್ರಕರಣದ ತನಿಖೆ ಎರಡು ತಿಂಗಳುಗಳೊಳಗೆ ಕಡ್ಡಾಯವಾಗಿ ಮುಗಿಯಬೇಕು ಎಂದಿದೆ. ಆದರೆ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಂವಿಧಾನದ ಈ ಯಾವ ನಿಯಮಗಳನ್ನು ಪೊಲೀಸ್ ಇಲಾಖೆ ಪಾಲಿಸುತ್ತಿಲ್ಲ. ಬಿಜೆಪಿ ಸರ್ಕಾರ ತಮಗೆ ಬೇಕಾದಂತೆ ಸಂವಿಧಾನದ ನಿಯಮಗಳನ್ನು ತಿರುಚಿಕೊಂಡಿದೆ" ಎಂದಿದ್ದಾರೆ.