ಗುವಾಹಟಿ, ಮೇ. 27 (DaijiworldNews/HR): ಲೈಂಗಿಕ ದೌರ್ಜನ್ಯ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕೃತ್ಯ ಎಸಗಿದವರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಅಸ್ಸಾಂ ಪೊಲೀಸರು ಘೋಷಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗುವ ಆಘಾತಕಾರಿ ದೃಶ್ಯಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇ 23ರಂದು ರಾಜಸ್ಥಾನದ ಜೋಧಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಗಾಲ್ಯಾಂಡ್ ಮೂಲದ ಸಂತ್ರಸ್ತೆಯದ್ದೇ ವಿಡಿಯೋ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿತ್ತು.
ಮಹಿಳೆಯೊಬ್ಬಳನ್ನು ಒಳಗೊಂಡ ಗುಂಪೊಂದು, ಸಂತ್ರಸ್ತೆಯನ್ನು ಥಳಿಸುವ, ಒದೆಯುವ ಹಾಗೂ ಆಕೆಯ ಮುಖದ ಮೇಲೆ ಹತ್ತಿ ನಿಲ್ಲುವ ಅಮಾನವೀಯ ಕೃತ್ಯಗಳನ್ನು ಎಸಗುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಂತ್ರಸ್ತೆ ಸಹಾಯಕ್ಕಾಗಿ ಯಾಚಿಸುತ್ತಿದ್ದಾಗ ಆ ದುಷ್ಕರ್ಮಿಗಳ ಗುಂಪು ಆಕೆಯ ಮೇಲೆ ಮತ್ತಷ್ಟು ದೌರ್ಜನ್ಯ ಎಸಗಿ ಬಳಿಕ ಆಕೆಯ ಬಟ್ಟೆಗಳನ್ನು ಕಳಚಿ ಬೆತ್ತಲಾಗಿಸಿ, ಹಲ್ಲೆ ಮುಂದುವರಿಸಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಇರುವುದು ನಾಗಾಲ್ಯಾಂಡ್ನಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ ಎಂದು ಅನೇಕರು ಪ್ರತಿಪಾದಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂನ ಎಸಿಪಿ ನೂರ್ ಮೊಹಮ್ಮದ್, "ಇದು ಲಾಕ್ಡೌನ್ ಕಾರಣದಿಂದ ಕುಟುಂಬದವರನ್ನು ಭೇಟಿ ಮಾಡಲಾಗದೆ ಬೇಸರಗೊಂಡು ಭಾನುವಾರ ರಾಜಸ್ಥಾನದ ಜೋಧಪುರದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣುಹಾಕಿಕೊಂಡಿದ್ದ ನಾಗಾಲ್ಯಾಂಡ್ ಮಹಿಳೆಯ ವಿಡಿಯೋ ಅಲ್ಲ" ಎಂದು ಹೇಳಿದ್ದಾರೆ.
ಈ ಇಬ್ಬರೂ ಮಹಿಳೆಯರು ಒಬ್ಬರೇ ಅಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಹೇಳಿದ್ದಾರೆ.
ವಿಡಿಯೋದಲ್ಲಿರುವ ಐವರು ಆರೋಪಿಗಳ ಫೋಟೊಗಳನ್ನು ಅಸ್ಸಾಂ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಅಪರಾಧಿಗಳ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.