ಬೆಂಗಳೂರು, ಮೇ.27 (DaijiworldNews/PY): ಕೊರೊನಾ ಸೋಂಕಿನಿಂದ ನಿಧನರಾದ ಶಿಕ್ಷಕರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ರಾಜ್ಯ ಸರ್ಕಾರ ಸರ್ಕಾರಿ ನೌಕರಿ ನೀಡಿದ್ದು, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನೌಕರಿಯ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕರಿ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ. ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 130 ಶಿಕ್ಷಕರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲಾಗಿದೆ.
ಈ ವೇಳೆ ಮಾತನಾಡಿದ ಸಚಿವರು, "ಕೊರೊನಾ ಸೋಂಕಿನಿಂದ ಶಿಕ್ಷಣ ಪರಿವಾರದ ಅನೇಕ ಮಂದಿ ಶಿಕ್ಷಕರು ನಮ್ಮನ್ನು ಅಗಲಿದ್ದಾರೆ. ಮೃತ ಶಿಕ್ಷಕರು ತಮ್ಮ ಕುಟುಂಬಗಳನ್ನು ಮಾತ್ರವಲ್ಲದೇ, ಶಾಲಾ ಮಕ್ಖಳು ತಮ್ಮ ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ಸ್ಪಂದಿಸಿ ಮೃತಪಟ್ಟ ಶಿಕ್ಷಕರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗಿದೆ" ಎಂದಿದ್ದಾರೆ.
"ತಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬದ ಸದಸ್ಯರು ತಮಗೆ ನೀಡಿರುವ ಅನುಕಂಪದ ನೌಕರಿಯ ಆದೇಶಗಳನ್ನು ಪಡೆದುಕೊಂಡು ಸೇವೆಗೆ ಸೇರ್ಪಡೆಗೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ" ಎಂದು ಹೇಳಿದ್ದಾರೆ.
ನೇಮಕಾತಿ ಪತ್ರಗಳನ್ನು ಪಡೆದುಕೊಂಡು ನೌಕರಿಗೆ ಸೇರ್ಪಡೆಯಾಗುತ್ತಿರುವವರಿಗೆ ವೃತ್ತಿ ತರಬೇತಿ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಪರಿಚಯಾತ್ಮಕ ತರಬೇತಿ ನೀಡುವಂತೆ ಸುರೇಶ್ ಕುಮಾರ್ ಅವರು ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.