ಚಿಕ್ಕಮಗಳೂರು, ಮೇ.27 (DaijiworldNews/PY): "ಸಿಎಂ ಯಾರಾಗುತ್ತಾರೆ ಎನ್ನುವ ಬಗ್ಗೆ ಮುಖ್ಯಮಂತ್ರಿ, ಸಚಿವರು ಶಾಸಕರು ತಲೆಕೆಡಿಸಿಕೊಳ್ಳುವುದು ಬೇಡ ಬದಲಾಗಿ ಜನರಿಗೆ ವಿಶ್ವಾಸ ತುಂಬುವ ಕಾರ್ಯವನ್ನು ಮಾಡಬೇಕಿದೆ" ಎಂದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಿಎಂ ನಾಯಕತ್ವ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, "ಇದು ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವ ಸಮಯವಲ್ಲ. ಜನರೊಂದಿಗೆ ಇದ್ದು, ಅವರಿಗೆ ವಿಶ್ವಾಸ ತುಂಬುವ ಕಾರ್ಯವನ್ನು ಮಾಡಬೇಕು. ಆ ಕಾರ್ಯವನ್ನು ಮಾಡುವಂತೆ ವಿನಂತಿಸುತ್ತೇನೆ" ಎಂದಿದ್ದಾರೆ.
"ವಿಷಯವನ್ನು ಯಾರು ಹೇಗೆ ಬಿಡುತ್ತಾ ಇದ್ದಾರೋ ತಿಳಿದಿಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಯಾರಾಗ್ತಾರೆ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದು ಸೂಕ್ತವಲ್ಲ. ನಮ್ಮನ್ನು ಆರಿಸಿದ ಜನ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಿಲ್ಲುವುದು ಅವಶ್ಯಕ" ಎಂದು ಹೇಳಿದ್ದಾರೆ.
"ಒಮ್ಮೊಮ್ಮೆ ಆಧಾರವಿಲ್ಲದೇ ಸುದ್ದಿಗಳು ಬರುತ್ತದೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತದೆ. ವದಂತಿಗಳಿಗೆ ಉತ್ತರಿಸಲು ಬರುವುದಿಲ್ಲ. ಊಹಾಪೋಹಗಳಿಗೆ ನಮ್ಮಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪ್ರತಿಕ್ರಿಯೆ ನೀಡಬಾರದು" ಎಂದಿದ್ದಾರೆ.