ಬೆಂಗಳೂರು, ಮೇ. 27 (DaijiworldNews/HR): ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಅನೇಕ ಚರ್ಚೆಗಳ ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿ ದೆಹಲಿಗೆ ಹೋಗಿದ್ದ ಬಿಜೆಪಿ ಬಂಡಾಯ ನಾಯಕರಿಗೆ ನಿರಾಸೆಯಾಗಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ ಬೆನ್ನಲ್ಲೇ ಇಂದು ವಿಧಾನಸೌಧದಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಿ.ಪಿಯೋಗೇಶ್ವರ್, "ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ, ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡ್ಕೊಂಡಿದೆ ನಮ್ಮ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶ ಅಲ್ಲ. ಅಷ್ಟೊಂದು ಶಕ್ತಿ ನನಗೆ ಇಲ್ಲ. ಆ ಅಭಿಪ್ರಾಯವೂ ನನಗೆ ಇಲ್ಲ" ಎಂದಿದ್ದಾರೆ.
ಇನ್ನು "ನಾನು ದೆಹಲಿಗೆ ಹೋಗ್ತಾ ಬರ್ತಾ ಇರ್ತೀನಿ. ಎಲ್ಲಾನೂ ಮಾಧ್ಯಮಗಳ ಮುಂದೆ ಹೇಳೋಕೆ ಆಗೋದಿಲ್ಲ. ಈ ಚರ್ಚೆ ಯಾಕೆ ಹುಟ್ಟಿತು ಅಂತ ನನಗೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗೋದು ನಾಯಕತ್ವದ ಬದಲಾವಣೆ ವಿಚಾರಕ್ಕಾಗಿಯೇ ಎಂದು ಯಾಕೆ ತಿಳಿದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ನನಗೆ ನಮ್ಮ ಪಕ್ಷ ಎಂಎಲ್ಸಿ ಮಾಡಿದೆ ಅದರ ಬಗ್ಗೆ ಗೌರವ ಇದೆ. ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲಬೇಕು ಎಂದುಕೊಂಡಿದ್ದೇನೆ, ಅದಕ್ಕಾಗಿ ಹೋಗುತ್ತೇನೆ. ಕೆಲವು ವಿಚಾರಗಳನ್ನು ನಾವು ಮಾಧ್ಯಮಗಳ ಮುಂದೆ ಹಂಚಿಕೊಳ್ಳೋಕೆ ಆಗಲ್ಲ" ಎಂದು ಪುನರುಚ್ಛರಿಸಿದ್ದಾರೆ.
"ನನ್ನ ವೈಯಕ್ತಿಕ ವಿಚಾರವನ್ನು ನಮ್ಮ ನಾಯಕರ ಮುಂದೆ ಹೇಳಿಕೊಂಡಿದ್ದು, ಸಿಎಂ ಬದಲಾವಣೆ ವಿಚಾರ ಬಂದಾಗ, ನಮ್ಮ ಬೆಂಬಲ ಇದೆಯೋ ಇಲ್ಲವೋ ಅನ್ನೋದನ್ನು ನಾಲ್ಕು ಗೋಡೆ ಮಧ್ಯೆ ತಿಳಿಸುತ್ತೇನೆ" ಎಂದರು.
ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತಾಡ್ತಿರೋದು ನನಗೆ ತಿಳಿದಿದೆ, ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡಬೇಕಾಗುತ್ತೆ. ನನ್ನ ದೆಹಲಿ ಭೇಟಿ ಯಾಕೆ ಇಷ್ಟೊಂದು ದೊಡ್ಡ ಸುದ್ದಿಯಾಯ್ತೋ ಗೊತ್ತಿಲ್ಲ. ನಾನು ಬೆಳಗ್ಗೆ ಹೋದೆ ಸಂಜೆ ಬಂದೆ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ" ಎಂದು ಹೇಳಿದ್ದಾರೆ.