ಬೆಂಗಳೂರು, ಮೇ. 27 (DaijiworldNews/HR): ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಮರಣ ಹೊಂದಿದ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧದ ರೈತರ ಹೋರಾಟಕ್ಕೆ 6 ತಿಂಗಳಾಗಿದ್ದು, ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು, ಈ ಸಾವುಗಳಿಗೆ ಕೇಂದ್ರದ ಸರ್ಕಾರವೇ ನೇರಹೊಣೆ. ಜಗತ್ತಿನ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳುವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ" ಎಂದಿದ್ದಾರೆ.
ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಂಬಂಧವಿರುವವರು. ಇಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿರುವುದು ದುರಂತವಾಗಿದ್ದು, ದೇಶದ ಎಲ್ಲ ರಂಗಗಳು ವಿಫಲವಾಗಿದ್ದಾಗ ಕೃಷಿಯು ರಾಜ್ಯದಲ್ಲಿ ಶೇ 6.4 ರಷ್ಟು, ದೇಶದಲ್ಲಿ 3.5 ರಷ್ಟು ಪ್ರಗತಿಯಾಗಿದೆಯೆಂದು ಸರ್ಕಾರಗಳೇ ತಮ್ಮ ವರದಿಗಳಲ್ಲಿ ಹೇಳಿಕೊಂಡಿವೆ. ಹಾಗಿದ್ದರೂ ತೊಗರಿ, ಹೆಸರು, ಸೂರ್ಯಕಾಂತಿ, ಕಡಲೆ ಕಾಯಿ ಮುಂತಾದ ಬೆಳೆಗಳಿಗೆ ಒಳ್ಳೆ ಬೆಲೆ ಏಕೆ ಸಿಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
"ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ. 120 ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ.16 ಹೆಚ್ಚಾಗಿದೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು? ತೊಗರಿಬೇಳೆಯ ಬೆಲೆ ಕಳೆದ ಕೆಲವು ತಿಂಗಳಿಂದ ಈಚೆಗೆ ಸರಾಸರಿ 100 ರೂಪಾಯಿಗಳಷ್ಟು ಹೆಚ್ಚಾಗಿದೆ. ಅನೇಕ ಕಡೆ ಕೆಜಿಗೆ 180 ರೂ.ವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಇದು 80-90 ರೂ. ಮಾತ್ರ ಇತ್ತು. ಪರಿಸ್ಥಿತಿ ಹೀಗೇ ಇದ್ದರೆ ರೈತರ ಉದ್ಧಾರ ಹೇಗೆ ಸಾಧ್ಯ?" ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಇನ್ನು "ವಿದೇಶಿ ಆಮದನ್ನು ನಿಲ್ಲಿಸಿ, ಅದಾನಿ ಮುಂತಾದವರು ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲ ಕೃಷಿ ಉತ್ಪನ್ನಗಳನ್ನು ವಶಪಡಿಸಿಕೊಂಡು ಮಾರುಕಟ್ಟೆಗೆ ತಂದು ಹಣದುಬ್ಬರವನ್ನು ನಿಯಂತ್ರಿಸಿ, ನ್ಯಾಯಯುತ ಬೆಲೆಗಳಿಗೆ ಮಾರುವಂತೆ ಸರ್ಕಾರ ಮಾಡಬೇಕು" ಎಂದರು.
"ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯಿದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯಿದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿಯನ್ನು ರಚಿಸಬೇಕು" ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.