ನವದೆಹಲಿ, ಮೇ.27 (DaijiworldNews/PY): ಅಲೋಪತಿ ಹಾಗೂ ಅಲೋಪತಿ ವೈದ್ಯರ ಕುರಿತು ಬಾಬಾ ರಾಮ್ದೇವ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ರಾಮ್ದೇವ್ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ್ದು, "ನನ್ನನ್ನು ಬಂಧಿಸಲು ಸಾಧ್ಯವಿಲ್ಲ" ಎಂದು ಸವಾಲು ಹಾಕುತ್ತಿದ್ದಾರೆ.
ಇದೀಗ ಸೋಶಿಯಲ್ ಮೀಡಿಯಾದಲ್ಲೂ #ArrestRamdev ಹ್ಯಾಶ್ಟ್ಯಾಗ್ ಟ್ರೆಡಿಂಗ್ನಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ದೇವ್, "ನನ್ನನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಸವಾಲೆಸೆದಿದ್ದಾರೆ.
ಅಲೋಪತಿಯನ್ನು ಮೂರ್ಖ ವಿಜ್ಞಾನ ಎಂದು ಟೀಕಿಸಿದ್ದ ಯೋಗ ಗುರು ಬಾಬಾ ರಾಮ್ದೇವ್, ಅಲೋಪತಿ ಔಷಧಿಗಳನ್ನು ಸೇವಿಸಿದ ಬಳಿಕ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದು, ದೇಶದ್ರೋಹದ ಆರೋಪದ ಮೇಲೆ ಬಾಬಾ ರಾಮ್ದೇವ್ ಅವರನ್ನು ಬಂಧಿಸಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು.
ಇದರ ಬೆನ್ನಲ್ಲೇ ಬಾಬಾ ರಾಮ್ದೇವ್ ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, "ನನ್ನನ್ನು ಯಾರಿಂದಲೂ ಬಂಧಿಸಲಾಗದು. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ" ಎಂದಿದ್ದಾರೆ.