ರಾಂಚಿ, ಮೇ.27 (DaijiworldNews/PY): ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ತಮಗೆ ರಜೆ ನೀಡಲು ನಿರಾಕರಿಸಿದ ಕಾರಣ ಬ್ಯಾಂಕ್ ಸಿಬ್ಬಂದಿಯೋರ್ವರು ಆಕ್ಸಿಜನ್ ಸಿಲಿಂಡರ್ ಸಹಿತ ಕರ್ತವ್ಯಕ್ಕೆ ಹಾಜರಾದ ಘಟನೆ ಜಾರ್ಖಂಡ್ನ ಬೊಕೊರಾದ ಸೆಕ್ಟರ್ 4ರಲ್ಲಿ ನಡೆದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಉದ್ಯೋಗಿಯಾಗಿರುವ ಅರವಿಂದ್ ಕುಮಾರ್ ಅವರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅರವಿಂದ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಪರೀಕ್ಷೆ ಮಾಡಿದ ವೇಳೆ ನೆಗೆಟಿವ್ ವರದಿ ಬಂದಿತ್ತು. ಆದರೆ, ಅವರಿಗೆ ಉಸಿರಾಟದ ತೊಂದರೆ ಇದ್ದ ಹಿನ್ನೆಲೆ ಮನೆಯಲ್ಲಿಯೇ ಆಕ್ಸಿಜನ್ ಸಪೋರ್ಟ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೇ, ಶ್ವಾಸಕೋಶದಲ್ಲಿ ಸೋಂಕು ತಗುಲಿದ್ದ ಕಾರಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು.
ಈ ಹಿನ್ನೆಲೆ ಅರವಿಂದ್ ಅವರು, ವೈದ್ಯಕೀಯ ದಾಖಲೆಯೊಂದಿಗೆ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ರಜೆಗಾಗಿ ಮನವಿ ಮಾಡಿದ್ದರು. ಆದರೆ, ರಜೆ ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗಿತ್ತು. ಹಾಗಾಗಿ ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಬರುವಂತಾಗಿದೆ ಎಂದಿದ್ದಾರೆ.
ಈ ಕಾರಣದಿಂದ ಬೇಸರಗೊಂಡ ಅರವಿಂದ್ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ರಾಜೀನಾಮೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಕುಟುಂಬದವರೂ ಕೂಡಾ ಬ್ಯಾಂಕ್ಗೆ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.