ನವದೆಹಲಿ, ಮೇ. 27 (DaijiworldNews/HR): ತನ್ನ ಸಾಕು ನಾಯಿಗೆ ಅನೇಕ ಹೈಡ್ರೋಜನ್ ಗ್ಯಾಸ್ ಬಲೂನ್ಗಳನ್ನು ಕಟ್ಟಿ ಅದನ್ನು ಹಾರುವಂತೆ ಮಾಡಿ ಆ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದ ದೆಹಲಿ ಮೂಲದ ಯೂಟ್ಯೂಬರ್ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ದೆಹಲಿ ಮೂಲದ ಯೂಟ್ಯೂಬರ್ನನ್ನು ಗೌರವ್ ಜಾನ್ ಎಂದು ಗುರುತಿಸಲಾಗಿದೆ.
ದೆಹಲಿ ಪಾರ್ಕ್ನಲ್ಲಿ ತನ್ನ ಸಾಕು ನಾಯಿಯನ್ನು ಹೈಡ್ರೋಜನ್ ಗ್ಯಾಸ್ ಬಲೂನ್ಗಳಿಂದ ಕಟ್ಟಿ ಮೇಲಕ್ಕೆ ಹಾರಿಸುವ ವಿಡಿಯೋವನ್ನು ಮಾಡಿ ಈ ವಿಡಿಯೋದಲ್ಲಿ ನಾಯಿ ಕೆಲವು ಕ್ಷಣಗಳ ಕಾಲ ಗಾಳಿಯಲ್ಲಿ ತೇಲಾಡುತ್ತಿರುವ ದೃಶ್ಯವಿದ್ದು, ಗೌರವ್ ತಾಯಿ ಮೇಲಕ್ಕೆ ಹಾರಿಸಲು ಹುರಿದುಂಬಿಸುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾನೆ. ಇದನ್ನು ಗಮನಿಸಿದ ಪ್ರಾಣಿ ದಯಾ ಸಂಘಟನೆಗಳ ದೂರಿನ ನಂತರ ವಿಡಿಯೋವನ್ನು ತೆಗೆದು ಹಾಕಿರುವ ಘಟನೆ ನಡೆದಿದೆ.
ಇನ್ನು ವಿಡಿಯೋದ ಬಗ್ಗೆ ಪೀಪಲ್ ಫಾರ್ ಆಯನಿಮಲ್ ಸಂಘಟನೆಯ ಸದಸ್ಯರು ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗೌರವ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲ ವಿಡಿಯೋವನ್ನು ಯೂಟ್ಯೂಬ್ನಿಂದ ಡಿಲೀಟ್ ಮಾಡಿದ್ದ ಗೌರವ್ ಬಳಿಕ ಮತ್ತೊಂದು ವಿಡಿಯೋವನ್ನು ತನ್ನ ಚಾನೆಲ್ನಲ್ಲಿ ಬಿಡುಗಡೆ ಮಾಡಿ, ಹಿಂದಿನ ವಿಡಿಯೋವನ್ನು ಡಿಲೀಟ್ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿರುವುದಾಗಿ ವರದಿಯಾಗಿದೆ.