ನವದೆಹಲಿ, ಮೇ 27 (DaijiworldNews/MS): ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನ ಮಂತ್ರಿ ಗ್ಯಾಸ್ಟನ್ ಬ್ರೌನೇ ಅವರು ಡೊಮೆನಿಕಾದಲ್ಲಿ ಬಂಧನವಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು 48 ಗಂಟೆಗಳಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಗುವಾದಿಂದ ಪರಾರಿಯಾಗಿ ಡೊಮೆನಿಕಾದಲ್ಲಿ ಬಂಧನವಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯ ವಿಚಾರವಾಗಿ WION ನ ಪ್ರಧಾನ ರಾಜತಾಂತ್ರಿಕ ವರದಿಗಾರ ಸಿಧಾಂತ್ ಸಿಬಲ್ ರೊಂದಿಗೆ ವರ್ಚುವಲ್ ಮೀಟಿಂಗ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು 'ಯಾವುದೇ ಕಾನೂನು ತೊಡಕುಗಳಿಲ್ಲದಿದ್ದರೆ ಮುಂದಿನ 48 ಗಂಟೆಗಳಲ್ಲಿ ಚೋಕ್ಸಿಯನ್ನು ಖಾಸಗಿ ಜೆಟ್ನಲ್ಲಿ ಭಾರತಕ್ಕೆ ವಾಪಾಸು ಕಳುಹಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ತಾವು ಡೊಮೆನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರ್ರಿಟ್ ರೊಂದಿಗೆ ಚರ್ಚೆ ನಡೆಸಿದ್ದು, ಚೋಕ್ಸಿಯನ್ನು ಆಯಂಟಿಗುವಾ ಮರಳಿಸದಂತೆ ಮನವಿ ಮಾಡಲಾಗಿದೆ. ಆಯಂಟುಗುವಾದಲ್ಲಿ ಮೆಹುಲ್ ಚೋಕ್ಸಿ ಎಲ್ಲ ರೀತಿಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು,ಕಾನೂನು ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಅವರಿಗೆ ಒದಗಿಸಬೇಕಾಗುತ್ತದೆ. ಹೀಗಾಗಿ ಅವರನ್ನು ಆಯಂಟಿಗುವಾಗೆ ಕರೆತಂದರೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ನೇರವಾಗಿ ಅವರನ್ನು ಭಾರತಕ್ಕೆ ರವಾನಿಸಲು ಕೋರಲಾಗಿದೆ ಎಂದು ಹೇಳಿದ್ದಾರೆ.
ಡೊಮೆನಿಕಾದಲ್ಲಿ ಚೋಕ್ಸಿಯನ್ನು ಬಂಧಿಸಲಾಗಿದ್ದು, ಆಯಂಟಿಗುವಾ ಪೊಲೀಸರು ಕೂಡ ಡೊಮೆನಿಕಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ, ಶೀಘ್ರದಲ್ಲೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಡೊಮೆನಿಕಾದಿಂದಲೇ ನೇರವಾಗಿ ಭಾರತಕ್ಕೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.