ನವದೆಹಲಿ, ಮೇ. 27 (DaijiworldNews/HR): 18 ತಿಂಗಳ ಮಗುವಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದ್ದು, ದೇಶದಲ್ಲೇ ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬಂದ ಮೊದಲ ಪ್ರಕರಣ ರಾಜಸ್ಥಾನದ ಬಿಕನೇರ್ನಲ್ಲಿ ನಡೆದಿದೆ.
ಪ್ರಸ್ತುತ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾದಿಂದ ಗುಣವಾದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಮೂಗಿನಿಂದ ಹರಡುವ ಬ್ಲ್ಯಾಕ್ ಫಂಗಸ್ ಕಣ್ಣುಗಳು ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ ಎನ್ನಲಾಗಿದೆ.
ಮದುಮೇಹ, ಕಿಡ್ನಿ ಸಮಸ್ಯೆ, ಕೊರೊನಾ, ಹೃದಯ ಸಂಬಂಧಿ ಮತ್ತು ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಸಂಧಿವಾತದಂತಹ ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿರುವ ಮತ್ತು ಇಮ್ಯುನಿಟಿ ಕಡಿಮೆ ಇರುವವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತದೆ.
ಆದರೆ ಇದೀಗ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬಂದಿರುವುದು ಆಘಾತಕಾರಿ ವಿಷಯವಾಗಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
ಇನ್ನು ಗುಜರಾತ್ನ ಅಹಮದಾಬಾದ್ನಲ್ಲಿ 15 ವರ್ಷದ ಬಾಲಕ ಕಪ್ಪು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದಾನೆ.
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಪ್ರಕಾರ, ಮಧುಮೇಹ ಅಥವಾ ಸ್ಟೀರಾಯ್ಡ್ ತೆಗೆದುಕೊಳ್ಳದವರಲ್ಲಿ ಕಪ್ಪು ಶಿಲೀಂಧ್ರ ಬಹಳ ವಿರಳವಾಗಿ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.