ನವದೆಹಲಿ, ಮೇ 27 (DaijiworldNews/MS): ಅಮೆರಿಕದ ಔಷಧೀಯ ದೈತ್ಯ ಕಂಪನಿಯಲ್ಲಿ ಒಂದಾದ ಫೈಜರ್ , ತಮ್ಮ ಕೊವೀಡ್ ಲಸಿಕೆಯೂ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸೂಕ್ತವಾಗಿದೆ ಅಲ್ಲದೆ ಭಾರತದಲ್ಲಿ ರೂಪಾಂತರಗೊಂಡಿರುವ ಸೋಂಕಿಗೆ ಪರಿಣಾಮಕಾರಿ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದು, 50 ಮಿಲಿಯನ್ ಪ್ರಮಾಣದ ಲಸಿಕೆಯನ್ನು ಭಾರತಕ್ಕೆ ಕಳುಹಿಸಲು ಸಿದ್ಧ ಎಂದು ಹೇಳಿದೆ.
ಲಸಿಕೆಯನ್ನು ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇದನ್ನು ತಿಂಗಳುಗಳ ಕಾಲ ಸಂಗ್ರಹಿಸಿಡಬಹುದಾಗಿದೆ ಎಂದು ಫೈಜರ್ ಹೇಳಿದೆ. ಇದರೊಂದಿಗೆ ಸರ್ಕಾರ ಮತ್ತು ಫೈಜರ್ ಕಂಪೆನಿ ಅಧಿಕಾರಿಗಳ ನಡುವೆ ಸರಣಿ ಮಾತುಕತೆ ನಡೆಯುತ್ತಿದೆ. ಜುಲೈ ಮತ್ತು ಅಕ್ಟೋಬರ್ ಒಳಗೆ ಐದು ಕೋಟಿ ಡೋಸ್ ಲಸಿಕೆ ನೀಡಲು ಫೈಜರ್ ಮುಂದಾಗಿದೆ.
ಭಾರತವು ಪ್ರಸ್ತುತ ಮುಖ್ಯವಾಗಿ ಎರಡು ದೇಶೀಯ ನಿರ್ಮಿತ ಲಸಿಕೆಗಳನ್ನು ಬಳಸುತ್ತಿದೆ. ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್, ಮತ್ತು ಭಾರತ್ ಬಯೋಟೆಕ್ನ ಕೊವಾಕ್ಸಿನ್ ನನ್ನು ದೇಶದಲ್ಲಿ ನೀಡಲಾಗುತ್ತಿದೆ. ಸದ್ಯ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ದೇಶದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ
ಇನ್ನೊಂದೆಡೆ "ನಾವು ಲಸಿಕೆಗಾಗಿ ಫಿಜರ್ ಮತ್ತು ಮಾಡರ್ನಾ ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಎರಡೂ ಕಂಪನಿಗಳು ಲಸಿಕೆಗಳನ್ನು ನೇರವಾಗಿ ನಮಗೆ ಮಾರಾಟ ಮಾಡಲು ನಿರಾಕರಿಸಿದೆ. ಅವರು ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿದ್ದಾರೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.