ನವದೆಹಲಿ, ಮೇ.27 (DaijiworldNews/PY): "ಪ್ರತಿಕೂಲ ಹವಾಮಾನದ ಮಧ್ಯೆಯೂ 12 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು 24 ಗಂಟೆಗಳ ಅವಧಿಯೊಳಗೆ 6 ರಾಜ್ಯಗಳಿಗೆ 969 ಟನ್ ದ್ರವ ವೈದ್ಯಕೀಯ ಆಕ್ಸಿಜನ್ ಅನ್ನು ಸಾಗಿಸಿವೆ" ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಮೂರು ರೈಲುಗಳು ತಮಿಳುನಾಡಿಗೆ ತಲುಪಿದರೆ, ನಾಲ್ಕು ಆಂಧ್ರಪ್ರದೇಶಕ್ಕೆ, ತಲಾ ಒಂದೊಂದು ರೈಲುಗಳು ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ ಹಾಗೂ ಕೇರಳಕ್ಕೆ ತಲುಪಿವೆ.
"ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನಿಂದ ಈ ರೈಲುಗಳು ಆಕ್ಸಿಜನ್ ಸಂಗ್ರಹಿಸಿಕೊಂಡು ಆರು ರಾಜ್ಯಗಳಿಗೆ ತಲುಪಿಸಿವೆ" ಎಂದು ಇಲಾಖೆ ತಿಳಿಸಿದೆ.
ದೇಶದ ಪ್ರಮುಖ ದ್ರಮ ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳು ಈ ಪ್ರದೇಶದಲ್ಲಿದ್ದು, ಪ್ರಸ್ತುತ ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಆಕ್ಸಿಜನ್ ಅನ್ನು ಒದಗಿಸುತ್ತಿವೆ.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಉತ್ತರ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ 130ರಿಂದ 140 ಕಿ.ಮೀ. ಗಾಳಿಯ ವೇಗದಲ್ಲಿ ಯಸ್ ಚಂಡಮಾರುತ ಅಪ್ಪಳಿಸಿತ್ತು. ಇದರ ನಡುವೆಯೇ ಈ ರಾಜ್ಯಗಳಲ್ಲಿ ಸಮುದ್ರತೀರದ ಪಟ್ಟಣ ಪ್ರದೇಶಗಳನ್ನು ಹಾದು ಬಂದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ನಿಗದಿತ ಸ್ಥಳಗಳಿಗೆ ಆಕ್ಸಿಜನ್ ತಲುಪಿಸಿವೆ.