ನವದೆಹಲಿ, ಮೇ.26 (DaijiworldNews/PY): ದೇಶದಲ್ಲಿ ಕೊರೊನಾ ಸೋಂಕಿನ ಜೊತೆಗೆ ಬ್ಲ್ಯಾಕ್ ಫಂಗಸ್ ಕೂಡ ಆತಂಕವನ್ನು ಸೃಷ್ಟಿಸುತ್ತಿದೆ. ಈ ನಡುವೆ ಬ್ಲ್ಯಾಕ್ ಫಂಗಸ್ ಮೂಲಗಳ ಬಗ್ಗೆ ತಜ್ಞರು ಒಂದೊಂದೇ ಸ್ಪೋಟಕ ಮಾಹಿತಿಗಳನ್ನು ನೀಡುತ್ತಿದ್ದು, "ಉದ್ದುದ್ದ ಗಡ್ಡದಿಂದಲೂ ಅಪಾಯ" ಎಂದು ತಜ್ಞರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಗಡ್ಡ ಹೊಂದಿರುವ ಜನರಿಗೆ ಮಾಸ್ಕ್ ಧರಿಸಲು ಕಷ್ಟವಾಗಬಹುದು. ಮುಖದ ಮೇಲೆ ಮಾಸ್ಕ್ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಹಾಗಾಗಿ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳು ಕ್ಷೌರ ಮಾಡಿಕೊಳ್ಳುವಂತೆ ಸೂಚಿಸಿವೆ.
"ಇನ್ನು ಒಂದೇ ಮಾಸ್ಕ್ ಅನ್ನು 2-3 ವಾರಗಳ ಕಾಲ ನಿರಂತರವಾಗಿ ಬಳಸಿದರೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲುವ ಸಾಧ್ಯತೆ ಇದೆ" ಎಂದೂ ತಜ್ಞರು ಹೇಳಿದ್ದಾರೆ.
ದೇಶದಲ್ಲಿ ಒಟ್ಟು 11,717 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿದ್ದು, ಗುಜರಾತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯವು ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿತ್ತು. ಇದು ಕೊರೊನಾ ಸೋಂಕಿನ ಜೊತೆಜೊತೆಗೆ ಮತ್ತೊಂದು ಭಯವನ್ನೇ ಸೃಷ್ಟಿಸಿದೆ.
ಏಮ್ಸ್ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, "ಸತತ 2- 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಹೆಚ್ಚಿದೆ. ಕೆಲವರು ಮಾಸ್ಕ್ ಸ್ವಚ್ಚಗೊಳಿಸದೇ ಅದನ್ನೇ ನಿರಂತರವಾಗಿ ಬಳಕೆ ಮಾಡುತ್ತಾರೆ. ಇದರಿಂದ ಫಂಗಸ್ ಸುಲಭವಾಗಿ ಬೆಳೆಯುತ್ತದೆ. ಹಾಗಾಗಿ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ" ಎಂದು ತಿಳಿಸಿದ್ದಾರೆ.
"ಬ್ಲಾಕ್ ಫಂಗಸ್ಗೆ ಮೊದಲ ಕಾರಣ ಅವೈಜ್ಞಾನಿಕವಾಗಿ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುವುದು ಹಾಗೂ ಮಾಸ್ಕ್ ಗಳನ್ನು ಸುದೀರ್ಘವಾಗಿ ಸ್ವಚ್ಥಗೊಳಿಸದೇ ಧರಿಸುವುದು. ಗಾಳಿ ಬೆಳಕು ಇಲ್ಲದೇ ಇರುವ ರೂಂ ಅಥವಾ ಜಾಗಗಳಲ್ಲಿ ಸುಧೀರ್ಘವಾಗಿ ಇರುವುದು ಕೂಡ ಬ್ಲಾಕ್ ಫಂಗಸ್ ಸೋಂಕಿಗೆ ಕಾರಣವಾಗುತ್ತದೆ" ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಇಎನ್ ಟಿ ವೈದ್ಯ ಡಾ. ಸುರೇಶ್ ನಾರುಕಾ ಹೇಳಿದ್ದಾರೆ.
"ರೋಗ ನಿರೋಧಕ ಶಕ್ತಿ ಕಡಿಮೆ ಇರು ವ್ಯಕ್ತಿಗಳಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದರೆ ಅದರ ಪರಿಣಾಮ ಮೂರು ಪಟ್ಟು ಹೆಚ್ಚಿರುತ್ತದೆ. ಅತಿಯಾದ ಸ್ಟಿರಾಯ್ಡ್ಗಳ ಬಳಕೆ ಕೂಡಾ ಕಾರಣವಾಗಿ ಕಡಿಮೆ ಸಮಯದಲ್ಲಿ ಸೋಂಕಿತರಲ್ಲಿ ಸೋಂಕು ಹೆಚ್ಚಾಗಬಹುದು' ಎಂದಿದ್ದಾರೆ.