ವಿಜಯಪುರ, ಮೇ.26 (DaijiworldNews/PY): "ದೇಶದ 100 ಕೋಟಿ ಜನರಿಗೆ ಕೊರೊನಾ ನಿಯಂತ್ರಣಕ್ಕೆ ಲಸಿಕೆಯೊಂದೇ ಶಾಶ್ವತ ಪರಿಹಾರ" ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.
"ಕೊರೊನಾದಿಂದಾಗಿ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿದ್ದು, ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಇದನ್ನು ತಡೆಗಟ್ಟಲು, ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮುಖ್ಯ" ಎಂದಿದ್ದಾರೆ.
"ಲಸಿಕೆಯನ್ನು ಈಗಾಗಲೇ ಮುಗಿಸಿರುವ ಅಮೇರಿಕಾ, ಯುರೋಪ್ ರಾಷ್ಟ್ರಗಳು, ಇಸ್ರೇಲ್ ಹಾಗೂ ಇತರ ದೇಶಗಳು ಕೊರೊನಾ ಮುಕ್ತವಾಗಿ ಅಲ್ಲಿನ ಜನ-ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಭಾರತದಲ್ಲಿಯೂ ಕೂಡಾ ಅದೇ ಮಾದರಿಯಲ್ಲಿ 130 ಕೋಟಿ ಜನರ ಪೈಕಿ ಕನಿಷ್ಠ 100 ಕೋಟಿ ಜನರನ್ನು ಗುರಿಯಾಗಿಸಿಕೊಂಡು ಲಸಿಕೆ ಹಾಕಿಸಬೇಕು" ಎಂದು ತಿಳಿಸಿದ್ದಾರೆ.
"ಹೆಚ್ಚಿನ ಲಸಿಕೆಯನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡಬೇಕು. ಅವಶ್ಯಕತೆ ಇರುವಷ್ಟು ಲಸಿಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡು, ಸರ್ಕಾರಗಳು ಲಸಿಕೆ ಹಾಕಲು ಮುಂದಾಗಬೇಕು" ಎಂದು ಹೇಳಿದ್ದಾರೆ.
"ಉಳಿದ ವಿಚಾರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದಿಗಿಟ್ಟು, 100 ಕೋಟಿ ಜನರಿಗೆ ಕಡಿಮೆ ಅವಧಿಯಲ್ಲಿ ಲಸಿಕೆ ಹಾಕಿಸುವ ಅಭಿಯಾನವನ್ನು ಮಾಡಿ, ಅದಕ್ಕಾಗಿ ಅವಶ್ಯಕ ಇರುವ ಎಲ್ಲಾ ನೆರವು, ವಿಶೇಷ ಆದ್ಯತೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಹಾಗಾದಲ್ಲಿ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಹಾಗೂ ಶಾಶ್ವತ ಪರಿಹಾರ" ಎಂದಿದ್ದಾರೆ.