ನವದೆಹಲಿ, ಮೇ.26 (DaijiworldNews/PY): ಪಿಎಂ ಕೇರ್ಸ್ಗೆ 2.51 ಲಕ್ಷ ರೂ. ದೇಣಿಗೆ ನೀಡಿದ್ದ ವ್ಯಕ್ತಿಯೋರ್ವನ ತಾಯಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಕೆಗೆ ಬೆಡ್ ಸಿಗದೇ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಅಹಮದಾಬಾದ್ ಮೂಲದ ವಿಜಯ್ ಪರಿಕ್ ಎಂಬವರು ಈ ಹಿಂದೆ ಕೊರೊನಾ ವಿರುದ್ದದ ಹೋರಾಟಕ್ಕಾಗಿ ಪಿಎಂ ಕೇರ್ಸ್ಗೆ 2.51 ಲಕ್ಷ ರೂ. ದೇಣಿಗೆ ನೀಡಿದ್ದರು ಎನ್ನಲಾಗಿದೆ. ಇದಾದ ಬಳಿಕ ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರಿಗೆ ಆಕ್ಸಿಜನ್ನ ಅವಶ್ಯಕತೆ ಇದ್ದ ಕಾರಣ ಆಕ್ಸಿಜನ್ ಬೆಡ್ಗಾಗಿ ಅವರು ಸಾಕಷ್ಟೂ ಹುಡುಕಾಡಿದರೂ ಕೂಡಾ ಒಂದೇ ಒಂದು ಬೆಡ್ ದೊರೆತಿಲ್ಲ. ಕೊನೆಗೆ ವಿಜಯ್ ಪರಿಕ್ ಅವರ ತಾಯಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ವಿಜಯ್ ಪರಿಕ್ ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದು, "ನಾನು ಪಿಎಂ ಕೇರ್ಸ್ ನಿಧಿಗೆ 2.51 ಲಕ್ಷ ರೂ. ದೇಣಿಗೆ ನೀಡಿದ್ದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನನ್ನ ತಾಯಿ ಆಕ್ಸಿಜನ್ ಬೆಡ್ ಸಿಗದೇ ಮೃತಪಟ್ಟರು. ಕೊರೊನಾದ ಮೂರನೇ ಅಲೆಯಲ್ಲಿ ಆಕ್ಸಿಜನ್ ಬೆಡ್ ಕಾಯ್ದಿರಿಸಲು ಎಷ್ಟು ಹಣ ದೇಣಿಗೆ ನೀಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿ. ನಾನು ನನ್ನ ಕುಟುಂಬದ ಸದಸ್ಯರನ್ನು ಕಳೆದುಕೊಳ್ಳಲಾರೆ" ಎಂದಿದ್ದಾರೆ.
ವಿಜಯ್ ಪರಿಕ್ ಅವರು ತಮ್ಮ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜನಾಥ್ ಸಿಂಗ್, ಆರ್ಎಸ್ಎಸ್, ಸ್ಮೃತಿ ಇರಾನಿ ಹಾಗೂ ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ.