ಬೆಂಗಳೂರು, ಮೇ.26 (DaijiworldNews/PY): ದೇಶದಲ್ಲಿ ಪತ್ತೆಯಾದ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಮಾಹಿತಿ ಆಧಾರದ ಮೇಲೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಒಟ್ಟು 29,250 ವಯಲ್ಸ್ ಅಂಫೋಟೆರಿಸಿನ್-ಬಿ ಔಷಧವನ್ನು ಹಂಚಿಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ, "ಕರ್ನಾಟಕದಲ್ಲಿ 481 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೃಢಪಟ್ಟಿದ್ದು, 1,221 ವಯಲ್ಸ್ ಅಂಫೋಟೆರಿಸಿನ್-ಬಿ ಔಷಧವನ್ನು ಒದಗಿಸಲಾಗಿದೆ. ಸೋಂಕು ಪ್ರಕರಣದ ಆಧಾರದ ಮೇಲೆ ಈ ಔಷಧ ಹಂಚಿಕೆ ನಿರಂತರವಾಗಿ ನಡೆಯಲಿದೆ" ಎಂದು ತಿಳಿಸಿದ್ದಾರೆ.
ಗುಜರಾತ್ ರಾಜ್ಯದಲ್ಲಿ 2,859 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 7,260 ವಯಲ್ಸ್ ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ 481 (1,221), ಮಹಾರಾಷ್ಟ್ರದಲ್ಲಿ 2,770 (7,034), ತೆಲಂಗಾಣದಲ್ಲಿ 744 (1,889), ಆಂದ್ರಪ್ರದೇಶದಲ್ಲಿ 768 (1,950), ಉತ್ತರಪ್ರದೇಶದಲ್ಲಿ 701 (1,780), ಹರಿಯಾಣದಲ್ಲಿ 436 (1,107), ರಾಜಸ್ಥಾನದಲ್ಲಿ 492 (1,249), ಮಧ್ಯಪ್ರದೇಶದಲ್ಲಿ 752 (1,910) ಪ್ರಕರಣಗಳು ಪತ್ತೆಯಾಗಿವೆ.